ಮಡಿಕೇರಿ, ನ.೧೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬೋದಕ ಆಸ್ಪತ್ರೆ) ವತಿಯಿಂದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಸಾಮಾಜಿಕ ಜಾಗೃತಿ ಮತ್ತು ನ್ಯೂಮೋನಿಯಾ ತಟಸ್ಥೀಕರಣ ಪ್ರಕ್ರಿಯೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ ೫ ವರ್ಷದೊಳಗಿನ ಮಕ್ಕಳಲ್ಲಿ ಮರಣಕ್ಕೆ ಪ್ರಮುಖ ಕಾರಣವಾದ ನ್ಯೂಮೋನಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ನವೆಂಬರ್ ೧೨ ರಂದು ವಿಶ್ವ ನ್ಯೂಮೋನಿಯಾ ದಿನ ಆಚರಿಸಲಾಗುತ್ತಿದೆ. ಕಾಯಿಲೆಯ ರಕ್ಷಣೆ, ಬರದಂತೆ ತಡೆಯುವುದು, ಚಿಕಿತ್ಸೆ ನೀಡುವುದರ ಬಗ್ಗೆ ಜನಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ ಎಂದರು.

ಸ್ಯಾನ್ಸ್ ಎಂದರೆ ಹಿಂದಿ ಭಾಷೆಯಲ್ಲಿ ಉಸಿರು ಎಂದರ್ಥ. ಮಕ್ಕಳಲ್ಲಿ ನ್ಯೂಮೋನಿಯಾ ಶೇ.೧೫, ನಿರ್ಜಲೀಕರಣ ಶೇ.೧೦ ಮರಣಗಳು ಸಂಭವಿಸುತ್ತಿವೆ. ಇವುಗಳನ್ನು ತಡೆಗಟ್ಟಲು ಆಂದೋಲನದ ರೂಪದಲ್ಲಿ ಸಾಮಾಜಿಕ ಆಂದೋಲನದ ಅರಿವು ಕಾರ್ಯಕ್ರಮ ರೂಪಿಸುವುದು ಅಗತ್ಯವಿದೆ. ಅಲ್ಲದೇ ಸೂಕ್ತ ತರಬೇತಿಯೊಂದಿಗೆ ವೈದ್ಯಕೀಯ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ೨೦೨೫ ರ ಅವಧಿಗೆ ಭಾರತದಲ್ಲಿ ನ್ಯೂಮೋನಿಯಾ ಕಾಯಿಲೆಯಿಂದ ಬಾಲ್ಯಾವಸ್ಥೆಯ ಮರಣದ ಪ್ರಮಾಣವನ್ನು ೧೦೦೦ ಜೀವಂತ ಹಾಗೂ ನವಜಾತ ಶಿಶುಗಳಲ್ಲಿ ಹಾಗೂ ಬಾಲ್ಯಾವಸ್ಥೆಯಲ್ಲಿ ಕಂಡುಬರುವ ನ್ಯೂಮೋನಿಯಾ ಕುರಿತು ಮುನ್ನೆಚ್ಚರಿಕಾ ಕ್ರಮಗಳು, ಪ್ರಾರಂಭಿಕ ಲಕ್ಷಣಗಳು, ನಿಯಂತ್ರಣ ಕ್ರಮಗಳ ಕುರಿತು ತೀವ್ರ ಗತಿಯಲ್ಲಿ ಮಾಹಿತಿ ನೀಡುವುದು ಹಾಗೂ ಸೋಂಕಿನ ಬಗ್ಗೆ ಬೇಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕುರಿತು ಪಾಲಕರಿಗೆ ಪೋಷಕರಿಗೆ ಅರಿವು ಮೂಡಿಸುವುದು ಅತ್ಯಾವಶ್ಯಕ ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎನ್.ಆನಂದ್ ಅವರು ಮಾತನಾಡಿ ನ್ಯೂಮೋನಿಯಾ ರೋಗದ ಪತ್ತೆ ಹಾಗೂ ಗುಣಮಟ್ಟದ ನಿರ್ವಹಣೆ ಹೆಚ್ಚಿಸಲು ಸೇವಾ ನಿರತ ಸಿಬ್ಬಂದಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸಮುದಾಯದ ಎಲ್ಲಾ ಹಂತದಲ್ಲಿ ಕುಟುಂಬ ಪೋಷಕರಿಗೆ ಬಾಲ್ಯಾವಸ್ಥೆಯ ಸೋಂಕಿನ ಆರೈಕೆಯ ಸಕಾರಾತ್ಮಕ ವರ್ತನಾ ಬದಲಾವಣೆಗೆ ಪ್ರಯತ್ನಿಸುವುದು.

ಸಮುದಾಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆ, ಹಾಗೂ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ವ್ಯಕ್ತಿಗತ ಸಂವಹನ ನ್ಯೂಮೋನಿಯಾ ಸೋಂಕನ್ನು ಗುರುತಿಸುವುದು. ಸೂಕ್ತ ಸೇವಾ ಸೌಲಭ್ಯಗಳ ಕುರಿತು ಸಾಮರ್ಥ್ಯ ಅಭಿವೃದ್ಧಿ ಪುನರ್ ಮನನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಗತ್ಯ. ಅಲ್ಲದೇ ನ್ಯೂಮೋನಿಯಾವು ಜನನದಿಂದ ಎರಡು ವರ್ಷದ ಒಳಗಿನ ಮಕ್ಕಳಲ್ಲಿ, ೬೫ ವರ್ಷ ಮೇಲ್ಪಟ್ಟ ವಯೋವೃದ್ಧರಲ್ಲಿ, ಗರ್ಭಿಣಿಯರು, ಎಚ್‌ಐವಿ ಸೋಂಕಿತರು, ತೀವ್ರತರ ಉಸಿರಾಟದ ತೊಂದರೆಯಿರುವವರು ಹೆಚ್ಚು ಸಾಧ್ಯತೆ ಹೊಂದಿರುತ್ತಾರೆ. ಇದಕ್ಕಾಗಿ ಇ-ಸಂಜೀವಿನಿ ಬಗ್ಗೆ ಹೊರರೋಗಿಗಳ ವಿಭಾಗದಲ್ಲಿ ಮಾಹಿತಿ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್ ಅವರು ಮಾತನಾಡಿ ನ್ಯೂಮೋನಿಯಾವು ಮಕ್ಕಳಲ್ಲಿ ಕಂಡುಬರುವ ಸೋಂಕು ಆಗಿದೆ. ಯೂನಿಸೆಫ್ ವರದಿಯಂತೆ ಸುಮಾರು ೭೧ ಮಕ್ಕಳಲ್ಲಿ ಒಂದು ಮಗು ನ್ಯೂಮೋನಿಯಾದಿಂದ ಬಳಲುತ್ತಿರುತ್ತದೆ. ಭಾರತದಲ್ಲಿ ಪ್ರತೀ ೩೦ ಸೆಕೆಂಡ್‌ಗೆ ಒಂದು ಮಗು ನ್ಯೂಮೋನಿಯಾದಿಂದ ಮರಣ ಹೊಂದುತ್ತಿದೆ. ಅಂದರೆ ಒಂದು ವರ್ಷದಲ್ಲಿ ಸುಮಾರು ೧,೨೭,೦೦೦ ಮಕ್ಕಳು ಮರಣ ಹೊಂದುತ್ತಿದ್ದಾರೆ. ಕರ್ನಾಟಕದಲ್ಲಿ ಶೇ.೧೬ ನ್ಯೂಮೋನಿಯಾ ಕಾಯಿಲೆಯಿಂದ ಮಕ್ಕಳ ಮರಣ ಸಂಭವಿಸುತ್ತಿದೆ. ಅಲ್ಲದೇ ಬಡವರ್ಗಗಳು ದುರ್ಗಮ ಪ್ರದೇಶದಲ್ಲಿ ವಾಸಿಸುವವರು ಬಡ ತೋಟ ಕಾರ್ಮಿಕರು ಅನಕ್ಷರಸ್ಥರಿಗೆ ಕಾಯಿಲೆ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಅವರು ಮೂಢನಂಬಿಕೆಗೆ ಮಾರು ಹೋಗಿ ರೋಗವನ್ನು ನಿರ್ಲಕ್ಷಿಸಿ ಶಿಶು ಮರಣಕ್ಕೆ ಕಾರಣವಾಗುತ್ತಿದ್ದಾರೆ. ಇದಕ್ಕಾಗಿ ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಗಳು ತಮ್ಮ ತಮ್ಮ ಹಂತದಲ್ಲಿ ಜನರಿಗೆ ಅರಿವು ಮೂಡಿಸಿ ಪ್ರಾರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಕಾಯಿಲೆ ತಡೆಗಟ್ಟುವುದು ಅತೀ ಮುಖ್ಯ ಎಂದು ತಿಳಿಸಿದರು.

ಕೊ.ವೈ.ವಿ.ಸಂ. ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಅವರು ಮಾತನಾಡಿ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಬರುವ ೧೦೦ ಮಕ್ಕಳಲ್ಲಿ ೪೦ ರಿಂದ ೫೦ ಮಕ್ಕಳು ನ್ಯೂಮೋನಿಯಾ ಸಂಬAಧಿತ ಸೋಂಕಿನಿAದ ಬಂದಿರುತ್ತಾರೆ. ನ್ಯೂಮೋನಿಯಾ ಕಾಯಿಲೆಯು ಅವಧಿ ಪೂರ್ವ ಜನನ ಮತ್ತು ಕಡಿಮೆ ತೂಕದ ಮಕ್ಕಳಲ್ಲಿ ಕಂಡುಬರುತ್ತದೆ ಹಾಗೂ ಗರ್ಭಿಣಿ ಅವಧಿಯಲ್ಲಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿAದ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಸಾವಿಗೆ ಕಾರಣವಾಗಬಹುದು. ಸ್ವಚ್ಛವಾದ ನೀರು, ನೈರ್ಮಲ್ಯ ಹಾಗೂ ಸೋಪಿನಿಂದ ಕೈತೊಳೆಯುವುದರಿಂದ ನ್ಯೂಮೋನಿಯಾ ರೋಗವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.

ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವುದು, ಮಗು ಹುಟ್ಟಿ ಅರ್ಧ ಗಂಟೆಯೊಳಗೆ ತಾಯಿಯ ಎದೆಹಾಲು ಕುಡಿಸಲು ಪ್ರಾರಂಭಿಸಬೇಕು. ನವಜಾತ ಶಿಶುಗಳಿಗೆ ಚುಚ್ಚುಮದ್ದು ಕೊಡಬೇಕು. ಮಗುವಿಗೆ ಆರು ತಿಂಗಳ ನಂತರ ಮೃದು ಆಹಾರವನ್ನು ನೀಡಬೇಕು. ಅತಿಸಾರ ಬೇಧಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ವಿಟಮಿನ್ ‘ಎ’ ಹಾಗೂ ಲಸಿಕೆಗಳನ್ನು ಸರಿಯಾದ ಸಮಯದಲ್ಲಿ ನೀಡುವುದು ಅಪೌಷ್ಠಿಕತೆ ಹಾಗೂ ಶ್ವಾಸಕೋಶದ ತೊಂದರೆಯನ್ನು ಕಡಿಮೆ ಮಾಡುವುದು ಅತೀ ಮುಖ್ಯ ಹಾಗೂ ಸಮತೋಲನ ಆಹಾರ, ವಿಶ್ರಾಂತಿ, ನಿಯಮಿತ ವ್ಯಾಯಾಮ, ಉತ್ತಮ ಆರೋಗ್ಯಕರ ಜೀವನ ಶೈಲಿ ಮುಖ್ಯ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿಗಳು, ಡಿಎನ್‌ಓ, ಶುಶ್ರೂಷಣಾಧಿಕಾರಿಗಳು, ವೈದ್ಯಾಧಿಕಾರಿಗಳು, ಜಿ.ಆ.ಕು.ಕ ಕಚೇರಿಯ ಎನ್‌ಎಚ್‌ಎಂ ವಿಭಾಗದ ಅಧಿಕಾರಿ, ಸಿಬ್ಬಂದಿಗಳು, ತಾ.ಆ.ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಮಕ್ಕಳ ಪೋಷಕರು ಮತ್ತು ತಾಯಂದಿರು ಹಾಜರಿದ್ದರು. ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ದಿವ್ಯರಾಣಿ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಅವರು ವಂದಿಸಿದರು.