ಭಾವನಾತ್ಮಕವಾಗಿ ಮತ ಕೇಳುತ್ತಿರುವ ಸಿದ್ದರಾಮಯ್ಯ : ಸಿಎಂ ಬೊಮ್ಮಾಯಿ

ಚಿಕ್ಕಮಗಳೂರು, ನ. ೧೫: ಸಿದ್ದರಾಮಯ್ಯ ಅವರು ತಮಗೆ ಆರೋಗ್ಯ ಸರಿ ಇಲ್ಲ ಎಂದು ಭಾವನಾತ್ಮಕವಾಗಿ ಮತ ಕೇಳುತ್ತಿದ್ದು, ಅವರು ನೂರು ಕಾಲ ಬದುಕಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ. ಜನಸಂಕಲ್ಪ ಯಾತ್ರೆ ಹಿನ್ನೆಲೆ ಕಡೂರಿಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ತಮಗೆ ಆರೋಗ್ಯ ಸರಿ ಇಲ್ಲ. ಬಿಪಿ ಶುಗರ್ ಇದೆ, ಬಹಳ ದಿನ ಬದುಕಿರ್ತೀನೋ ಇಲ್ಲವೋ ಗೊತ್ತಿಲ್ಲ. ನಾನು ಸಿಎಂ ಆಗಬೇಕಾದರೆ ನೀವು ಮತ ಹಾಕಲೇಬೇಕು ಎಂದು ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ೨೦೧೩ ರಲ್ಲೂ ಸಿದ್ದರಾಮಯ್ಯ ಅವರು ಇದೇ ರೀತಿ ಹೇಳಿದ್ದರು. ಆಗ ಜನ ಅವರನ್ನು ನಂಬಿ ಮತ ಹಾಕಿದ್ದರು. ಆದರೆ, ಸಿದ್ದರಾಮಯ್ಯ ಜನರ ಮತಗಳಿಗೆ ಬೆಲೆ ನೀಡಿಲ್ಲ. ಸಿದ್ದರಾಮಯ್ಯ ಅವರ ಆಡಳಿತ ಕಾಲದಲ್ಲಿ ಕೊಲೆ, ಸುಲಿಗೆ ಜಾಸ್ತಿ ಇತ್ತು. ಈಗ ಜನ ಅವರನ್ನು ನಂಬದೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಈಗ ಮತ್ತೆ ಅವರನ್ನು ನಂಬುವ ಸ್ಥಿತಿಯಲ್ಲಿ ಜನ ಇಲ್ಲ. ಕನ್ನಡಿಗರು ಇಂತಹ ಮಾತಿಗೆ ಬೆಲೆ ನೀಡಲ್ಲ. ಕನ್ಮಡಿಗರು ವಿಶ್ಲೇಷಣೆ ಮಾಡಿ ಮತ ಹಾಕುತ್ತಾರೆ ಎಂದು ತಿಳಿಸಿದರು.

ಬಲವಂತದ ಧಾರ್ಮಿಕ ಮತಾಂತರಕ್ಕೆ ನನ್ನ ವಿರೋಧವಿದೆ : ಸಿದ್ದರಾಮಯ್ಯ

ಮೈಸೂರು, ನ. ೧೫: ಬಲವಂತದ ಧಾರ್ಮಿಕ ಮತಾಂತರಕ್ಕೆ ನನ್ನ ವಿರೋಧವಿದೆ ಎಂದು ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ತಿಳಿಸಿದ್ದಾರೆ. ಒಂದು ಧರ್ಮದವರಿಗೆ ಆಮಿಷ ಒಡ್ಡಿ ಬಲವಂತವಾಗಿ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಿದರೆ ನನ್ನ ವಿರೋಧವಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಆರ್ಟಿಕಲ್ ೨೫ರ ಅಡಿಯಲ್ಲಿ ಭಾರತೀಯ ಸಂವಿಧಾನವು ಎಲ್ಲಾ ನಾಗರಿಕರಿಗೆ ಯಾವುದೇ ಧರ್ಮವನ್ನು ಅಳವಡಿಸಿಕೊಳ್ಳಲು ಮತ್ತು ಆಚರಿಸಲು ಸ್ವಾತಂತ್ರö್ಯವನ್ನು ನೀಡಿದೆ ಎಂದು ಹೇಳಿದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ಕೆಡವುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎರಡು ಬಾರಿ ಸಂಸದರಾಗಿರುವವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅವುಗಳನ್ನು ಸರ್ಕಾರವೇ ಕಟ್ಟಿದೆ; ಕೆಡವಲು ಇವರು ಯಾರು? ಇದು ಅವರ ಹಣದಿಂದ ನಿರ್ಮಾಣವಾಗಿಲ್ಲ. ಬಸ್ ತಂಗು ದಾಣಗಳು ಗುಂಬಜ್ ಅನ್ನು ಹೋಲುವಂತಿಲ್ಲ ಎಂಬ ನಿಯಮವಿದೆಯೇ? ಇದೇ ರೀತಿಯ ಎಲ್ಲಾ ಕಟ್ಟಡಗಳನ್ನು ಕೆಡವುತ್ತಾರಾ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಕಲಿ ಡೆಲಿವರಿ ಆ್ಯಪ್ ಮೂಲಕ ೨.೪ ಲಕ್ಷ ರೂಪಾಯಿ ವಂಚನೆ

ಬೆAಗಳೂರು, ನ. ೧೫: ನಕಲಿ ಫುಡ್ ಡೆಲಿವರಿ ಆ್ಯಪ್‌ಗಳನ್ನು ಸೃಷ್ಟಿಸಿ ಜನರಿಗೆ ರೂ. ೨.೪ ಲಕ್ಷ ವಂಚಿಸಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೂರ್ವ ವಿಭಾಗದ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಸಂತ್ರಸ್ತರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಖಾಸಗಿ ಕಂಪೆನಿಯೊAದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ದೀಪಿಕಾ ಮತ್ತು ಉದ್ಯಮಿ ಇಮ್ರಾನ್ ಬೇಗ್ ಎಂಬವರು ಈ ಆ್ಯಪ್‌ಗಳಲ್ಲಿನ ಆಫರ್‌ಗಳ ಬಗ್ಗೆ ತಿಳಿದ ನಂತರ ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್ಲಿಕೇಶನ್‌ಗಳಲ್ಲಿ ಫುಡ್ ಆರ್ಡರ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪಾವತಿ ಸಮಸ್ಯೆಗಳ ಬಗ್ಗೆ ಫೋನ್ ಮೂಲಕ ಮಾತನಾಡಿದ ವಂಚಕ, ಅವರ ಬಿಲ್‌ಗಳನ್ನು ಮರುಪಾವತಿಸಲು ಲಿಂಕ್‌ಗಳನ್ನು ಕಳುಹಿಸಿದ್ದಾನೆ. ಅವರಿಬ್ಬರು ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಅವರ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್ಗಳಿಂದ ೨.೪ ಲಕ್ಷ ರೂಪಾಯಿಯನ್ನು ಕಳೆದು ಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ನಕಲಿ ಅಪ್ಲಿಕೇಶನ್‌ಗಳನ್ನು ರಚಿಸಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರಿಸಲಾಗಿದೆ ಮತ್ತು ಲಿಂಕ್‌ಗಳನ್ನು ಜನರಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ದರೋಡೆ ಮಾಡಿ ಗುಂಡು ಹಾರಿಸಿದ್ದ ದರೋಡೆಕೋರರ ಬಂಧನ

ಚಿಕ್ಕಬಳ್ಳಾಪುರ, ನ. ೧೫: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆ ಲೂಟಿ ಮಾಡಿ ಆತನ ಮಗನಿಗೆ ಗುಂಡು ಹಾರಿಸಿದ್ದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಮೂವರು ಅಂತರ ರಾಜ್ಯ ದರೋಡೆಕೋರರನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತ ರನ್ನು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಬಹಿರಾಮ್ ನಗರದ ಆರಿಫ್ (೩೫), ರಾಂಪುರ ಜಿಲ್ಲೆಯ ಮಿಲಾಕ್ ತಾಲೂಕಿನ ಚಿಂತಾಮನ್ ಖಾಟೆ ಗ್ರಾಮದ ನಿವಾಸಿ ಜಮ್‌ಶೆಡ್ ಖಾನ್ (೨೭) ಮತ್ತು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆಯ ಕದಿರಿ ಪಟ್ಟಣದ ಪಠಾಣ್ ಮೊಹಮ್ಮದ್ ಹ್ಯಾರಿಸ್ ಖಾನ್ (೩೦) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಮೂರು ಬಂದೂಕುಗಳು, ೪೬ ಗುಂಡುಗಳು, ೩.೪೧ ಲಕ್ಷ ನಗದು, ಚಿನ್ನದ ಸರ, ೨೧ ಬೆಳ್ಳಿ ವಸ್ತುಗಳು ಮತ್ತು ಅಪರಾಧಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇತರ ಆರೋ ಪಿಗಳಿಗಾಗಿ ಶೋಧ ನಡೆಯುತ್ತಿದೆ. ನವೆಂಬರ್ ೯ ರಂದು ಐವರು ದರೋಡೆಕೋರರ ತಂಡವು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್‌ಐ) ನಾರಾಯಣ ಸ್ವಾಮಿ ಅವರ ಮನೆಗೆ ನುಗ್ಗಿ ಅವರ ಮಗನಿಗೆ ಗುಂಡು ಹಾರಿಸಿ ಚಿನ್ನಾಭರಣ ಮತ್ತು ನಗದು ದೋಚಿತ್ತು. ಎಎಸ್‌ಐ ನಾರಾಯಣಸ್ವಾಮಿ ಅವರ ಪುತ್ರ ಶರತ್ ಮೇಲೆ ದರೋಡೆಕೋರರು ಮೂರು ಸುತ್ತಿನ ಗುಂಡುಗಳನ್ನು ಹಾರಿಸಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.

ಶ್ರದ್ಧಾ ಹತ್ಯೆ: ದೇಹದ ೧೨ ತುಂಡುಗಳು ಪತ್ತೆ-ತಲೆ ನಾಪತ್ತೆ

ದೆಹಲಿ, ನ. ೧೫: ದೇಶವೇ ಬೆಚ್ಚಿ ಬೀಳುವ ರೀತಿಯಲ್ಲಿ ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ಎಂಬ ಯುವತಿಯ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಅಫ್ತಾಬ್ ಎಂಬ ಯುವಕ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಹತ್ಯೆ ಮಾಡಿ ೩೫ ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದ. ಈ ಪೈಕಿ ದೇಹದ ೧೨ ತುಂಡುಗಳು ಪತ್ತೆಯಾಗಿದ್ದು, ತಲೆ ಭಾಗದ ದೇಹದ ತುಂಡು ಇನ್ನಷ್ಟೇ ಪತ್ತೆಯಾಗಬೇಕಿದೆ. ಶ್ರದ್ಧಾ ಕೊಲೆಯಾದ ಚತ್ತಾರ್ ಪುರದ ಫ್ಲಾಟ್ ಹಾಗೂ ಆಕೆಯ ದೇಹವನ್ನು ತುಂಡರಿಸಿ ಬಿಸಾಡಿದ್ದ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಈವರೆಗೂ ವಶಕ್ಕೆ ಪಡೆಯಲಾಗಿರುವ ಮಾದರಿಗಳನ್ನು ಅವೆಲ್ಲವೂ ಮನುಷ್ಯರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪರೀಕ್ಷೆಗೆ ಕಳಿಸಲಾಗಿದೆ.

ಪ್ರಧಾನಿ ಮೋದಿಯ ಸಲಹೆ ಜಿ-೨೦ ಶೃಂಗಸಭೆಯಲ್ಲಿ ಸದ್ದು

ಬಾಲಿ, ನ. ೧೫: ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಸಲಹೆ ನೀಡಿದ್ದಾಗ ಪ್ರಧಾನಿ ಮೋದಿ ಹೇಳಿದ್ದ ಮಾತುಗಳು ಈಗ ಬಾಲಿಯಲ್ಲಿ ನಡೆಯುತ್ತಿರುವ ಜಿ-೨೦ ಶೃಂಗಸಭೆಯಲ್ಲೂ ಸದ್ದು ಮಾಡಿದ್ದು, ಸದಸ್ಯ ರಾಷ್ಟçಗಳು ರಷ್ಯಾಗೆ ನೀಡುವ ಸಲಹೆ, ಎಚ್ಚರಿಕೆಗಳಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಲು ನಿರ್ಧರಿಸಿವೆ. ಇದು ಯುದ್ಧದ ಕಾಲವಲ್ಲ ಎಂದು ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದು ಜಿ-೨೦ಯ ಅಧಿಕೃತ ಹೇಳಿಕೆಗಳ ದಾಖಲೆಗೆ ಸೇರ್ಪಡೆಯಾಗಿದೆ. ಇದಕ್ಕೆ ಪರಮಾಣು ಶಸ್ತಾçಸ್ತçಗಳ ಬಳಕೆಯನ್ನು ವಿರೋಧಿಸಿರುವ ಎಲ್ಲಾ ರಾಯಭಾರಿಗಳೂ ಒಪ್ಪಿಗೆ ಸೂಚಿಸಿದ್ದಾರೆ.

ಸೂಟ್‌ಕೇಸ್‌ನಲ್ಲಿ ಶವ ಪತ್ತೆ

ಪಂಜಾಬ್, ನ. ೧೫: ಪಂಜಾಬ್ ರಾಜ್ಯದ ಜಲನ್ದರ್ ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ಪುರುಷನ ಮೃತದೇಹವು ಸೂಟ್‌ಕೇಸೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೂಟ್ಕೇಸ್‌ಅನ್ನು ಸ್ಟೇಷನ್ ಬಳಿ ಇಟ್ಟು ಪರಾರಿಯಾದ ವ್ಯಕ್ತಿಯ ವೀಡಿಯೋ ಸೆರೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಮೃತ ವ್ಯಕ್ತಿ ಯಾರು ಎಂಬುದನ್ನು ಇನ್ನಷ್ಟೇ ಕಂಡು ಹಿಡಿಯಬೇಕಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.