ಮಡಿಕೇರಿ, ನ.೧೫ : ಗೋಣಿಕೊಪ್ಪಲು ಸೀಗೆತೋಡು ನಿವಾಸಿ ಶಬರೀಶ ಶಾಂತ ದಂಪತಿ ಪುತ್ರಿ ನಮೃತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂಡ ನೀಡಲಾಗುವ ಪ್ರತಿಷ್ಠಿತ ‘ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ’ ಭಾಜನರಾಗಿದ್ದಾರೆ. ಮಕ್ಕಳ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಜವಾಹರ್ ಲಾಲ್ ಬಾಲಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ನಮೃತಾಳಿಗೆ ಪ್ರತಿಷ್ಠಿತ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಗೋಣಿಕೊಪ್ಪಲು ಅರ್ವತೋಕ್ಲುವಿನ ಸರ್ವದೈವತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ನಮೃತಾ, ೨೦೨೧ರ ನವೆಂಬರ್ ೬ರಂದು ಮಧ್ಯಾಹ್ನ

(ಮೊದಲ ಪುಟದಿಂದ) ಎಂದಿನAತೆ ಕಾಲೇಜು ಮುಗಿಸಿ ಮನೆಕಡೆಗೆ ಹೆಜ್ಜೆ ಹಾಕುತ್ತಿದ್ದಳು. ಆ ಸಂದರ್ಭ ಮನೆ ಸಮೀಪದಲ್ಲಿರುವ ಕೆರೆಯಲ್ಲಿ ವೃದ್ಧರೋರ್ವರು ಮುಳುಗುತ್ತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದುದ್ದನ್ನು ಗಮನಿಸಿದ ನಮೃತಾ ಕೆರೆಗೆ ಧುಮುಕಿ ಮುಳುಗುತ್ತಿದ್ದ ವೃದ್ಧನನ್ನು ಸುರಕ್ಷಿತವಾಗಿ ದಡ ಸೇರಿಸುವ ಮೂಲಕ ಜೀವ ರಕ್ಷಿಸಿದ್ದಳು. ಈ ಘಟನೆಯನ್ನು ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಮೃತಾ ಹೆಸರನ್ನು ಪ್ರತಿಷ್ಠಿತ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಾಗಿ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು.