ಮಡಿಕೇರಿ, ನ. ೧೪: ಅತಿ ಕಿರಿಯ ವಯಸ್ಸಿನಲ್ಲಿಯೇ ದೂರದ ಓಟ ಸೇರಿದಂತೆ ಇತರ ಕ್ರಿಡಾಕೂಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕ್ರೀಡಾಪಟು ಕಟ್ಟೆಮನೆ ಪ್ರಕೃತಿ ಬೊಪಯ್ಯ ಅವಳ ಸಾಧನೆಯನ್ನು ಪರಿಗಣಿಸಿ, ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಕ್ರಿಡಾ ಜಾತ್ರೆಯಲ್ಲಿ ಸನ್ಮಾನಿಸಿ, ಗೌರವಿಸಲಾಗಿದೆ.

ದಾವಣಗೆರೆಯ ಹರಿಹರದ ಶ್ರೀ ಕಾಮಧೇನು ಕ್ರೀಡಾ ಹಾಗೂ ಸಾಂಸ್ಕೃತಿಕ ಸಮುದಾಯ ಸೇವಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಹರಿಹರ ಕ್ರೀಡಾ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಪ್ರಕೃತಿ (೧೧) ೧೫ ವರ್ಷದೊಳಗಿನವರ ೧೫೦೦ ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ, ೨೫ ವರ್ಷದೊಳಗಿನವರ ೩೦೦೦ ಮೀ.ನಲ್ಲಿ ೪ನೇ ಸ್ಥಾನ, ೫೦೦೦ಮೀ. ಮುಕ್ತ ಓಟದ ಸ್ಪರ್ಧೆಯಲ್ಲಿ ೫ನೇ ಸ್ಥಾನ ಗಳಿಸಿದ್ದಾಳೆ. ಈಕೆ ಮರಗೋಡು ಬಳಿಯ ಕಟ್ಟೆಮಾಡು ನಿವಾಸಿ ಕಟ್ಟೆಮನೆ ದೀಪು ಹಾಗೂ ಮೋನಿಕಾ ದಂಪತಿಯ ಪುತ್ರಿಯಾಗಿದ್ದು, ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.