ವೀರಾಜಪೇಟೆ, ನ. ೧೩: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರು ಮತ್ತು ಆದಿವಾಸಿಗಳಿಗೆ ಸ್ವಂತ ಸೂರು ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಮಾಡುತ್ತಿರುವುದರಿಂದ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಬಡ ಕುಂಟುAಬದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಸಿ.ಪಿ.ಐ.(ಎಂ) ವತಿಯಿಂದ ಕಾರ್ಮಾಡು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಸಂದರ್ಭ ಸಿಪಿಐಎಂ ಪಕ್ಷದ ಅಮ್ಮತ್ತಿ ಶಾಖೆಯ ಕಾರ್ಯದರ್ಶಿ ಎ. ಮಹದೇವ ಮಾತನಾಡಿ, ಹಲವು ವರ್ಷಗಳಿಂದ ನಿವೇಶನಕ್ಕಾಗಿ ದಲಿತರು ಮತ್ತು ಆದಿವಾಸಿಗಳು ಕಾರ್ಮಾಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ನಿವೇಶನ ರಹಿತರಿಗೆ ಸರಕಾರ ನಿವೇಶನ ಒದಗಿಸುವ ಕೆಲಸ ಮಾಡಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಲು ಮುಂದಾಗಿಲ್ಲ. ನಮ್ಮ ಮನವಿಗೂ ಯಾವುದೇ ಸ್ಪಂದನೆ ದೊರಕಿಲ್ಲ. ಆದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಕಾರ್ಮಾಡು ಗ್ರಾಮದ ಸ.ನ. ೨೯೫/೧ಪಿ೧ರಲ್ಲಿ ೧,೯೯ ಎಕರೆ ಪೈಸಾರಿ ಜಾಗವಿದ್ದು ಆ ಜಾಗವನ್ನು ನಿವೇಶನ ರಹಿತರಿಗೆ ನೀಡುವಂತೆ ಜಿಲ್ಲಾಧಿಕಾರಿ, ಕಂದಾಯ ಇಲಾಖೆಗೂ ಮನವಿ ಸಲ್ಲಿಸಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಗತ್ಯವಿದ್ದಲ್ಲಿ ಕಾನೂನಿನ ಹೋರಾಟ ನಡೆಸುವುದಾಗಿ ಹೇಳಿದರು.

ಜೆ.ಡಿ.ಎಸ್ ಜಿಲ್ಲಾ ಉಪಾಧ್ಯಕ್ಷೆ ಜಯಮ್ಮ ಮಾತನಾಡಿ, ಕಳೆದ ೭೦ ವರ್ಷಗಳಿಂದ ಅಮ್ಮತ್ತಿ ಪಟ್ಟಣದ ಬಸ್ ತಂಗುದಾಣದ ಬಳಿ ಇದ್ದ ಶೌಚಾಲಯವನ್ನು ಇತ್ತೀಚೆಗೆ ಒಡೆದುಹಾಕಿ ಅದೇ ಜಾಗದಲ್ಲಿ ಪಂಚಾಯಿತಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಪಟ್ಟಣಕ್ಕೆ ಬರುವ ಸಾರ್ವಜನಿಕರಿಗೆ ಮಹಿಳೆಯರಿಗೆ ಶೌಚಾಲಯ ಇಲ್ಲದೆ ಸಮಸ್ಯೆ ಉಂಟಾಗಿದ್ದು, ಕೂಡಲೇ ಪಂಚಾಯಿತಿ ಅದೇ ಜಾಗದಲ್ಲಿ ಶೌಚಾಲಯ ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ನಾಣಯ್ಯ ಹಾಗೂ ತಾಲೂಕು ಕಚೇರಿ ಶಿರಸ್ತೇದಾರ್ ಪೊನ್ನು ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಮಾತನಾಡಿ, ಪೈಸಾರಿ ಜಾಗ ಎರಡುಕಡೆ ಇದ್ದು ಅದನ್ನು ಸರ್ವೆಮಾಡಿ ನಂತರ ಸರ್ಕಾರದ ಆದೇಶದಂತೆ ನಿವೇಶನ ರಹಿತರಿಗೆ ನೀಡಲಾಗುವುದು. ಅದಕ್ಕೂ ಮೊದಲು ಫಲಾನುಭವಿಗಳು ನಿರಾಶ್ರಿತರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಕೊಳ್ಳುವಂತೆ ತಿಳಿಸಿದರು.

ಆರಂಭದಲ್ಲಿ ರಾಮ ಮಂದಿರದಿAದ ಪ್ರತಿಭಟನೆ ಮೆರವಣಿಗೆ ಹೊರಟು ಅಮ್ಮತ್ತಿ ಮುಖ್ಯರಸ್ತೆ ಮೂಲಕ ಸಾಗಿ ಕಾರ್ಮಾಡು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಂದರ್ಭ ಸಿಪಿಐ ಎಂ. ಪಕ್ಷದ ಇಬ್ರಾಹಿಂ, ಬಿ.ಕೆ.ಮಾಂಕು. ರಾಚಪ್ಪಾಜಿ, ಪಾಪಣ್ಣ, ಹೊನ್ನಪ್ಪ, ಕುಮಾರ, ಮನೋಜ್, ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಮಹಿಳಾ ಸದಸ್ಯರು ಹೆಚ್ಚು ಭಾಗವಹಿಸಿದ್ದರು.