ಮಡಿಕೇರಿ, ನ. ೧೩: ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಸುನ್ನಿ ಮೇಹಲ್ಲ್ ಫೆಡರೇಶನ್ ವತಿಯಿಂದ ತಾ. ೧೫ ರಿಂದ ೩೦ರವರೆಗೆ ಕೊಡಗಿನಲ್ಲಿ ಶಾಲಾ, ಕಾಲೇಜು ಸೇರಿದಂತೆ ಪ್ರತಿ ಗ್ರಾಮಗಳಲ್ಲೂ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎಸ್.ಎಂ.ಎಫ್. ಜಿಲ್ಲಾಧ್ಯಕ್ಷ ಸಿ.ಎಂ. ಹಮೀದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಯುವಕರನ್ನು, ವಿದ್ಯಾರ್ಥಿ ಗಳನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಮಾಫಿಯ ದಂಧೆ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸು ತ್ತಿದೆ ಎಂದು ಆರೋಪಿಸಿದರು. ಇದರ ವಿರುದ್ಧ ಸುನ್ನಿಮೇಹಲ್ಲ್ ಫೆಡರೇಶನ್ ದೇಶಾದ್ಯಂತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಂತೆ ಕೊಡಗಿನಲ್ಲೂ ವೈದ್ಯರು, ಪೊಲೀಸ್ ಇಲಾಖೆಗಳ ಸಹಕಾರದೊಂದಿಗೆ ಹದಿನೈದು ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದೆಂದು ಮಾಹಿತಿ ನೀಡಿದರು.
ಜಾಗೃತಿ ಕಾರ್ಯಕ್ರಮಕ್ಕೆ ತಾ. ೧೫ ರಂದು ಸಿದ್ದಾಪುರದಲ್ಲಿ ಚಾಲನೆ ದೊರೆಯಲಿದ್ದು, ಶಾಲಾ, ಕಾಲೇಜು, ಮಸೀದಿ ಸೇರಿದಂತೆ ಪ್ರತಿ ಗ್ರಾಮ ಗಳಲ್ಲೂ ಮಾದಕ ಸೇವನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದೆಂದರು.
ಅಮಲು ಪದಾರ್ಥ ಸೇವನೆಯಿಂದ ವಿದ್ಯಾರ್ಥಿಗಳು ಹಾಗೂ ಯುವಕರ ಭವಿಷ್ಯ ಹಾಳಾಗುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಈ ದುಶ್ಚಟಗಳಿಂದ ಮಕ್ಕಳನ್ನು ಪಾರುಮಾಡಲು ಪೋಷಕರು ಹಾಗೂ ವಿವಿಧ ಸಂಘ, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದ ಅವರು, ಪೊಲೀಸ್ ಇಲಾಖೆ ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದರು.
ಫೆಡರೇಷನ್ನ ಉಪಾಧ್ಯಕ್ಷ ಕೆ.ಎ. ಯಾಕುಬ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿ ಗಳು ಶಿಕ್ಷಣವನ್ನು ಮೊಟಕುಗೊಳಿಸಿ ಕೂಲಿ ಕಾರ್ಮಿಕರಾಗಿ ಪರಿವರ್ತನೆ ಗೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ಕಟ್ಟಬೇಕಾದ ವಿದ್ಯಾರ್ಥಿಗಳು ದೇಶಕ್ಕೆ ಮಾರಕವಾಗುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೊಡಗನ್ನು ಗಾಂಜಾ ಮುಕ್ತಗೊಳಿಸುವಲ್ಲಿ ರಾಜಕಾರಣಿಗಳು ಕೂಡ ಪಕ್ಷಾತೀತವಾಗಿ ಕೈಜೋಡಿಸ ಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಅಬ್ದಲ್ ಕರೀಂ, ಖಜಾಂಚಿ ರಫೀಕ್, ಸದಸ್ಯ ಹಂಸ ಉಪಸ್ಥಿತರಿದ್ದರು.