ಶನಿವಾರಸಂತೆ, ನ. ೧೪: ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಸರಕಾರದ ವಿವೇಕ ಯೋಜನೆಯಡಿ ರೂ. ೧೩.೯ ಲಕ್ಷ ವೆಚ್ಚದಲ್ಲಿ ೪ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ, ಸರಕಾರದ ವಿವೇಕ ಯೋಜನೆಯಡಿ ಸೋಮವಾರಪೇಟೆ ತಾಲೂಕಿಗೆ ಮಂಜೂರಾದ ರೂ. ೨ ಕೋಟಿ ಅನುದಾನದಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯಂದೇ ನೂತನ ಕೊಠಡಿಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ಮುಖ್ಯ ಶಿಕ್ಷಕ ವಿಶ್ವನಾಥ್, ಶಿಕ್ಷಕರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರ್ಜಾನಾ, ಪಿಡಿಓ ಬಿ.ಜೆ. ಮೇದಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಲಿನಿ, ಸದಸ್ಯರಾದ ಮಧು, ಶರತ್ ಶೇಖರ್, ಎಸ್.ಎನ್. ರಘು, ಸರ್ದಾರ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್, ಗುತ್ತಿಗೆದಾರ ಗಣೇಶ್ ಹಾಜರಿದ್ದರು.