ಗೋಣಿಕೊಪ್ಪಲು, ನ. ೧೩: ಮೈಸೂರು ಹಾಗೂ ಕೊಡಗಿನ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಕೊಡಗಿನ ಗಡಿ ಭಾಗವಾದ ಆನೆಚೌಕೂರು – ತಿತಿಮತಿ ರಾಜ್ಯ ಹೆದ್ದಾರಿಯ ಮತ್ತಿಗೋಡು ಸಾಕಾನೆ ಶಿಬಿರದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾರೀ ಗಾತ್ರದ ಗುಂಡಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಾರೀ ವಾಹನಗಳು ಹಾಗೂ ಇತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿAದ ಗುಂಡಿ ಬಿದ್ದ ರಸ್ತೆಯಿಂದಾಗಿ ಸಮಸ್ಯೆ ಎದುರಾಗಿದೆ.

ಕಳೆದ ಬಾರಿ ಸುರಿದ ಮಳೆಯಿಂದಾಗಿ ತಾಲೂಕಿನ ಬಹುತೇಕ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿವೆ. ಸರ್ಕಾರ ಈ ಬಗ್ಗೆ ಹಂತ ಹಂತವಾಗಿ ಹಣ ಬಿಡುಗಡೆಗೊಳಿಸಿದ್ದರೂ ನಿಗಧಿತ ಸಮಯದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಟೆಂಡರ್ ಪ್ರಕ್ರಿಯೆ ಎಂಬ ತಾಂತ್ರಿಕ ಸಮಸ್ಯೆಯನ್ನು ಮುಂದಿಟ್ಟುಕೊAಡು ಕಾಮಗಾರಿ ನಡೆಸಲು ಇಲಾಖೆ ಹಿಂದೇಟು ಹಾಕುತ್ತಿದೆ. ನಾಗರಿಕರು ಪ್ರತಿದಿನ ಹೊಸ ಹೊಸ ವಾಹನಗಳನ್ನು ರಸ್ತೆಗೆ ಇಳಿಸುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನಗಳಿಗೆ ಸಮಸ್ಯೆ ಎದುರಾಗಿದೆ. ಖಾಸಗಿ ಬಸ್‌ಗಳು, ಟ್ಯಾಕ್ಸಿ ವಾಹನಗಳು ಗುಂಡಿ ಬಿದ್ದ ರಸ್ತೆಯಲ್ಲಿ ಅನಿವಾರ್ಯವಾಗಿ ಸಂಚರಿಸಬೇಕಾಗಿರುವುದರಿAದ ವಾಹನಗಳು ಆಗಿಂದ್ದಾಗಿಯೇ ದುಸ್ಥಿತಿ ತಲುಪುತ್ತಿದೆ.

ಗಡಿ ಭಾಗ ಆನೆಚೌಕೂರು ವಿನಿಂದ ಪ್ರಾರಂಭವಾಗುವ ರಾಜ್ಯ ಹೆದ್ದಾರಿಯ ಮತ್ತಿಗೋಡು ಬಳಿ ಭಾರೀ ಗುಂಡಿ ಬಿದ್ದಿದೆ. ತಿತಿಮತಿ ಪಟ್ಟಣದಿಂದ ಗೋಣಿಕೊಪ್ಪ ನಗರದವರೆಗೂ ಉತ್ತಮ ರಸ್ತೆಯಿದ್ದು ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳನ್ನು ಮುಚ್ಚಬೇಕಾಗಿದೆ. ಭದ್ರಗೊಳ ಸಮೀಪ ಸೇತುವೆ ಬಳಿ ದೊಡ್ಡ ಗಾತ್ರದ ಗುಂಡಿ ಬಿದ್ದು ವರ್ಷಗಳು ಕಳೆದಿವೆ ಆದರೂ ಇದನ್ನು ಮುಚ್ಚುವ ಪ್ರಕ್ರಿಯೆಯಲ್ಲಿ ಇಲಾಖೆ ನಿರ್ಲಕ್ಷö್ಯ ವಹಿಸಿದೆ. ಇದರಿಂದ ವಾಹನ ಸಂಚಾರರಿಗೆ ಅಪಾಯ ಕಾದಿದೆ.

ಗೋಣಿಕೊಪ್ಪ ಪಟ್ಟಣದಿಂದ ವೀರಾಜಪೇಟೆ ಮಾರ್ಗವಾಗಿ ತೆರಳುವ ೧೭ ಕಿ.ಮೀ. ಉದ್ದದ ರಸ್ತೆಯು ಗುಣಮಟ್ಟದಿಂದ ಕೂಡಿದ್ದು ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳನ್ನು ದುರಸ್ತಿ ಪಡಿಸಬೇಕಾಗಿದೆ. ಹಾತೂರುನಿಂದ ಆರಂಭವಾಗುವ ರಸ್ತೆಗಳು ಅಲ್ಲಲ್ಲಿ ಭಾರೀ ಗುಂಡಿಗಳು ಕಾಣಿಸಿಕೊಂಡಿವೆ. ಬಿಟ್ಟಂಗಾಲ ಸಮೀಪದಿಂದ ಆರಂಭ ವಾಗುವ ರಸ್ತೆಯು ವೀರಾಜಪೇಟೆಯ ಮೀನುಪೇಟೆವರೆಗೂ ಉತ್ತಮವಿದ್ದು ವೀರಾಜಪೇಟೆ ನಗರದಲ್ಲಿ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಅತ್ಯಂತ ಕೆಟ್ಟದಾಗಿವೆ. ರಸ್ತೆಗಳಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಗೋಣಿಕೊಪ್ಪ-ಮಾಯಮುಡಿ –ಕೋಣನಕಟ್ಟೆ -ಪೊನ್ನಪ್ಪಸಂತೆ -ಬಾಳೆಲೆ -ನಿಟ್ಟೂರು – ಕಾರ್ಮಾಡು ರಸ್ತೆಯು ಉತ್ತಮವಾಗಿದ್ದು ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳು ಹೊರತುಪಡಿಸಿ ಬಹುತೇಕ ರಸ್ತೆಗಳು ಉತ್ತಮಾಗಿದೆ.

ಪೊನ್ನಪ್ಪಸಂತೆ ಕಿರುಗೂರು -ನಲ್ಲೂರು - ಪೊನ್ನಂಪೇಟೆ ಸಂಪರ್ಕ ರಸ್ತೆಯು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಇತಿಹಾಸವಿರುವ ಈ ರಸ್ತೆಯನ್ನು ಇಲ್ಲಿಯ ತನಕ ಅಭಿವೃದ್ಧಿಪಡಿಸಿದ ಉದಾಹರಣೆಗಳಿಲ್ಲ. ಪೊನ್ನಂಪೇಟೆ –ಮತ್ತೂರು ರಸ್ತೆಯು ಕಳೆದ ಭಾರಿ ಅಭಿವೃದ್ಧಿಪಡಿಸಿದ್ದು ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣಗೊಳಿಸಲಾಗಿತ್ತು. ರಸ್ತೆ ದುರಸ್ತಿ ಕಾರ್ಯ ನಡೆದು ೬ ತಿಂಗಳೊಳಗೆ ಈ ಹೊಸ ರಸ್ತೆಯಲ್ಲಿ ಭಾರಿ ಗುಂಡಿಗಳು ದರ್ಶನ ನೀಡುತ್ತಿವೆ.

ಪೊನ್ನಂಪೇಟೆ – ಕಾನೂರು-ಕುಟ್ಟ ರಸ್ತೆಯು ಹಾಳಾಗಿದ್ದು ಅಲ್ಲಲ್ಲಿ ಭಾರೀ ಪ್ರಮಾಣದ ಗುಂಡಿಗಳು ಕಾಣಬಹುದಾಗಿದೆ. ಈ ಗುಂಡಿ ಬಿದ್ದ ರಸ್ತೆಯನ್ನು ಗುತ್ತಿಗೆದಾರರು ಮಣ್ಣು ಮುಚ್ಚಿ ಭರ್ತಿ ಮಾಡುತ್ತಿರುವ ಸಂದರ್ಭ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಕೇವಲ ಮಣ್ಣುಮುಚ್ಚುವುದರಿಂದ ರಸ್ತೆಯ ಗುಣಮಟ್ಟ ಹದಗೆಡುತ್ತವೆ. ಬದಲಾಗಿ ವೆಟ್‌ಮಿಕ್ಸ್ನಿಂದ ಗುಂಡಿ ಮುಚ್ಚಿಸುವಂತೆ ಅಧಿಕಾರಿಗಳಿಗೆ ಮಾಹಿತಿ ಒದಗಿಸಿ ಮಣ್ಣು ಮುಚ್ಚುವ ಕೆಲಸವನ್ನು ತಡೆ ಹಿಡಿದಿದ್ದರು.

ಪೊನ್ನಂಪೇಟೆ- ಹುದಿಕೇರಿ- ಟಿ.ಶೆಟ್ಟಿಗೇರಿ- ಶ್ರೀಮಂಗಲ -ಕುಟ್ಟ ರಾಜ್ಯ ಹೆದ್ದಾರಿಯು ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದರೂ ಬೇಗೂರು ಬಳಿ ರಸ್ತೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಹಲವೆಡೆ ಭಾರೀ ಪ್ರಮಾಣದ ರಸ್ತೆಯ ಉದ್ದಕ್ಕೂ ಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರ ಮಾಡಲು ಸಾಧ್ಯವೇ ಆಗದ ಪರಿಸ್ಥಿತಿ

(ಮೊದಲ ಪುಟದಿಂದ) ನಿರ್ಮಾಣವಾಗಿದೆ. ಒಟ್ಟಿನಲ್ಲಿ ದ.ಕೊಡಗಿನ ಹಲವೆಡೆ ರಸ್ತೆಗಳು ಹಾಳಾಗಿದ್ದು ಗುಂಡಿ ಮುಚ್ಚುವ ಕೆಲಸ ಕೂಡಲೇ ನಡೆಯಬೇಕಾಗಿದೆ. ನಿರ್ವಹಿಸುವ ಕೆಲಸದ ಗುಣಮಟ್ಟವನ್ನು ಕಾಪಾಡಲು ಇಲಾಖೆಯ ಅಧಿಕಾರಿಗಳು ವಿಶೇಷ ರೀತಿಯ ಮುತುವರ್ಜಿ ವಹಿಸಬೇಕಾಗಿದೆ.

-ಹೆಚ್.ಕೆ. ಜಗದೀಶ್