ಸುಂಟಿಕೊಪ್ಪ, ನ. ೧೩: ಬಿಲ್ಲವ ಸಮಾಜದವರು ಶೈಕ್ಷಣಿಕವಾಗಿ ಮುಂದುವರಿಯುವದರ ಜೊತೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಏಳಿಗೆ ಸಾಧಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಸುಂಟಿಕೊಪ್ಪದ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದಿAದ ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಜಯಂತೋತ್ಸವ, ಗೌರವ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೋಷಣೆಗೆ ಒಳಗಾದ ಸಮಾಜ ದವರನ್ನು ಮುಖ್ಯವಾಹಿನಿಗೆ ತಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಚಿಂತನೆಗಳಿAದ ಸಮಾಜ ಕಟ್ಟುವ ಕೆಲಸವನ್ನು ಮಾಡಬೇಕು. ಸರಕಾರ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರಲ್ಲದೆ ಬಿಲ್ಲವ ಸಮಾಜದ ಕಟ್ಟಡ ನಿರ್ಮಿಸಲು ಸರಕಾರದಿಂದ ಅನುದಾನ ದೊರಕಿಸಿಕೊಡುವುದಾಗಿ ಶಾಸಕ ರಂಜನ್ ಭರವಸೆ ನೀಡಿದರು.

ಕುದ್ರೋಳಿ ಶ್ರೀಗೋಕರ್ಣ ನಾಥೇಶ್ವರ ದೇವಾಲಯದ ಖಜಾಂಜಿ ಪದ್ಮನಾಭ ಅವರು ಮಾತನಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ಬಿಲ್ಲವರನ್ನು ಸರಕಾರ ಕಡೆಗಣಿಸುತ್ತಿದೆ. ರಾಜಕೀಯ ಶಕ್ತಿ ಸಮಾಜ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಸಮಬಾಳು ಸಮಪಾಲು ಎಂಬುದು ವೇದಿಕೆಗೆ ಸೀಮಿತವಾಗಿದೆ. ಬಿಲ್ಲವ ಅಭಿವೃದ್ಧಿ ನಿಗಮ ಸ್ಥಾಪನೆಯಾಗ ಬೇಕು. ಇದಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

೫೦ ವರ್ಷ ದಾಂಪತ್ಯ ಜೀವನ ಪೂರೈಸಿರುವ ಬಿಲ್ಲವ ಸಮಾಜದ ೫ ಜೋಡಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಬಿಲ್ಲವ ಸಮಾಜದ ೧೦ ಮಂದಿಯನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇಕಡ ೭೫ ಕ್ಕಿಂತ ಅಧಿಕ ಅಂಕ ಪಡೆದ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

(ಮೊದಲ ಪುಟದಿಂದ)

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಳು ಚಿತ್ರರಂಗದ ಹಾಸ್ಯ ನಟ ನವರಸರಾಜ ಬೋಜರಾಜ ವಾಮಂಜೂರು ಮಾತನಾಡಿ, ಮೊದಲು ಮನೆಗೆ ಅನಂತರ ಊರು ದೇಶಕ್ಕೆ ಸೇವೆ ಸಲ್ಲಿಸುವಂತಾಗಬೇಕು. ಹಣ, ಸಂಪತ್ತು, ಆಸ್ತಿ ಶಾಶ್ವತವಲ್ಲ; ವಿದ್ಯೆ ಶಾಶ್ವತವಾದದ್ದು, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮುಖೇಶ್ ವಹಿಸಿದ್ದರು.

ಸೋಮವಾರಪೇಟೆ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ. ಭಾಸ್ಕರ್, ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಗಣೇಶ, ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಹೆಚ್.ಬಿ. ರಮೇಶ, ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಗೌರವ ಅಧ್ಯಕ್ಷ ಬಿ.ಕೆ. ಮೋಹನ್, ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಬಿಲ್ಲವ ವಿದ್ಯಾರ್ಥಿ ಘಟಕದ ಪ್ರೀತಮ್, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಉಪಸ್ಥಿತರಿದ್ದರು.

ಜಯಂತಿ ಮತ್ತು ತಂಡದವರು ಪ್ರಾರ್ಥಿಸಿ, ವೆಂಕಪ್ಪ ಪೂಜಾರಿ ನಿರೂಪಿಸಿ, ಮುಖೇಶ್ ಸ್ವಾಗತಿಸಿದರು. ಮಕ್ಕಳಿಂದ ನೃತ್ಯಪ್ರದರ್ಶನ ನಡೆಯಿತು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಚಂಡೆ ವಾದ್ಯಗೋಷ್ಠಿಯೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಕೋಟಿ ಚೆನ್ನಯ್ಯರ ಭಾವಚಿತ್ರವನ್ನು ಮಂಟಪದಲ್ಲಿ ಕುಳ್ಳಿರಿಸಿ ಮಹಿಳೆಯರಿಂದ ಕುಂಭಕಳಶವನ್ನು ಒಳಗೊಂಡು ಮೆರವಣಿಗೆ ನಡೆಯಿತು.