ಕಣಿವೆ, ನ. ೧೩: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ಸಾಹಿತಿ ನಾ. ಡಿಸೋಜಾ ಮಕ್ಕಳ ದತ್ತಿ ಕಾರ್ಯಕ್ರಮದ ಅಂಗವಾಗಿ ಕುಶಾಲನಗರ ತಾಲೂಕಿನ ಪಿಯು ಹಾಗೂ ಪದವಿ ಹಂತದ ಕಾಲೇಜುಗಳಿಗೆ ಆಶುಭಾಷಣ ಹಾಗೂ ಭಾವಗೀತೆಗಳ ಗಾಯನ ಸ್ಪರ್ಧೆಗಳನ್ನು ಸ್ಥಳೀಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಕಥೆ, ಕವನ ಹಾಗೂ ಸಾಹಿತ್ಯ ಬರೆಯುವ ನಿಟ್ಟಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಕಥೆ, ಕವನ, ನಾಟಕ ಮೊದಲಾದ ಸಾಹಿತ್ಯಗಳು ವ್ಯಕ್ತಿಗಳ ಮನಸ್ಸುಗಳನ್ನು ಉಲ್ಲಸಿತಗೊಳಿಸುತ್ತವೆ. ಇದಕ್ಕಾಗಿ ಸಾಹಿತ್ಯ ಪರಿಷತ್ತು ನಾಡಿನ ಅನೇಕ ಸಾಹಿತಿಗಳ ಸ್ಮರಣೆಯ ಮೂಲಕ ಜಿಲ್ಲಾದ್ಯಂತ ಹಲವು ಕಾರ್ಯಕ್ರಮ ಗಳ ಮೂಲಕ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತಿದೆ ಎಂದು ಹೇಳಿದರು.
ನಾ. ಡಿಸೋಜಾ ದತ್ತಿ ಉಪನ್ಯಾಸ ಮಾಡಿದ ಮಹಿಳಾ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ವಿದ್ಯಾರ್ಥಿಗಳು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಕಥೆ - ಕವನಗಳನ್ನು ಬರೆಯಲು ಸಹಕಾರಿಯಾಗುತ್ತದೆ. ಬರಹಗಳು ಯಾವುದೇ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆಯಾಗದಂತಿರಬೇಕು. ಆ ನಿಟ್ಟಿನಲ್ಲಿ ಬರಹಗಾರರಿಗೆ ಭಾವನೆಗಳು ಮುಖ್ಯ ಎಂದು ಫ್ಯಾನ್ಸಿ ಮುತ್ತಣ್ಣ ಹೇಳಿದರು.
ಕಥೆಗಾರರಿಗೆ ಅಲ್ಲಿನ ನೆಲ - ಜಲ, ಸಂಸ್ಕೃತಿ, ಪರಿಸರ, ಪ್ರಾಣಿ - ಪಕ್ಷಿಗಳು ಹಾಗೂ ಸಂದರ್ಭಗಳು ವಸ್ತುವಾಗಬೇಕು ಎಂದು ಫ್ಯಾನ್ಸಿ ಮುತ್ತಣ್ಣ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜಿನ ಉಪನ್ಯಾಸಕ ಡಾ.ಎನ್. ನಾಗೇಂದ್ರ ಸ್ವಾಮಿ ಮಾತನಾಡಿ, ಕೊಡಗಿನ ಗೌರಮ್ಮ, ಅಪ್ಪಚ್ಚುಕವಿ, ಪಂಜೆ ಮಂಗೇಶರಾಯ್, ಅನಂತ ಪದ್ಮನಾಭ ರಾವ್, ಭಾರತೀಸುತ ರಂತಹ ಮಹಾನ್ ಸಾಹಿತಿಗಳು ರಚಿಸಿದ ಸಾಹಿತ್ಯದಿಂದಾಗಿ ಕೊಡಗಿನ ಸಾಹಿತ್ಯ ಶ್ರೀಮಂತವಾಗಿದೆ.
ಇAದು ವಿದ್ಯಾರ್ಥಿಗಳಿಗೆ ಹೆಚ್ಚು ಆಲಿಸುವಿಕೆ, ಸಾಹಿತ್ಯದ ಓದುವಿಕೆ, ಮಾತುಗಾರಿಕೆ ಹಾಗೂ ಬರಹಗಾರಿಕೆ ಅತೀ ಮುಖ್ಯವಾಗಬೇಕು. ಹಾಗೆಯೇ ಭಾಷಾಭಿಮಾನ ಹಾಗೂ ನಾಡಪ್ರೇಮ ಒಡಮೂಡಬೇಕು ಎಂದು ಡಾ. ನಾಗೇಂದ್ರ ಸ್ವಾಮಿ ಕರೆಕೊಟ್ಟರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಸತಿ ನಿಲಯದ ಮೇಲ್ವಿಚಾರಕ ಮಧು, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಸುಬ್ರಮಣ್ಯ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಸ್. ನಾಗರಾಜು, ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕರಾದ ಸೂದನ ರತ್ನಾವತಿ, ಲೀಲಾಕುಮಾರಿ ತೊಡಿಕಾನ, ಹೇಮಲತಾ, ಟಿ.ವಿ. ಶೈಲಾ, ಕಾಮಾಕ್ಷಿ, ಎಂ.ಎನ್. ಕಾಳಪ್ಪ ಇದ್ದರು.