ಮಡಿಕೇರಿ, ಅ. ೧೩: ಕಳೆದ ೭ ದಿನಗಳಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಶ್ವತ್ಥ್ ಅಯ್ಯಪ್ಪ ಹಾಗೂ ಡಾ.ಅಖಿಲ್ ಕುಟ್ಟಪ್ಪ ಸ್ಮರಣಾರ್ಥ ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದ ಸಹಯೋಗದಲ್ಲಿ ದಿ. ಅಖಿಲ್ ಹಾಗೂ ಅಶ್ವತ್ಥ್ ಪೋಷಕರಾದ ಕೋಡಿಮಣಿಯಂಡ ರಘು ಮಾದಪ್ಪ ಹಾಗೂ ಅನಿತಾ ದಂಪತಿ ಆಯೋಜಿಸಿದ್ದ ೭ನೇ ವರ್ಷದ ಜಿಲ್ಲಾ ಮಟ್ಟದ ಅಂತರಶಾಲಾ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೇರಿಯ ಸಂತ ಜೋಸೆಫರ ಶಾಲೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಡಿಕೇರಿಯ ಕೊಡಗು ವಿದ್ಯಾಲಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ನಿಗದಿತ ೨೦ ಓವರ್‌ಗಳ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಡಗು ವಿದ್ಯಾಲಯ ೯ ವಿಕೆಟ್ ಕಳೆದುಕೊಂಡು ೧೧೧ ರನ್ ಪೇರಿಸಿ ಎದುರಾಳಿ ತಂಡಕ್ಕೆ ೧೧೨ ರನ್‌ಗಳ ಗುರಿಯನ್ನು ನೀಡಿತು.

ಕೊಡಗು ವಿದ್ಯಾಲಯ ಪರ ಮುಶ್ರಫ್ ೨೦ ಬೌಲ್‌ಗೆ ೨೮, ನಿಖಿತ್ ೨೫ ಬೌಲ್‌ಗೆ ೨೭ ರನ್ ಸಿಡಿಸಿ ತಂಡಕ್ಕೆ ನೆರವಾದರು. ಉಳಿದಂತೆ ವಿಶಾಕ್ ೪ ಬೌಲ್‌ಗೆ ೮, ಕಾಶಿಫ್ ೭ ಬೌಲ್‌ಗೆ ೫ ರನ್, ಯಶ್ವಿನ್ ೨೩ಕ್ಕೆ ೧೧, ಚೆಂಗಪ್ಪ ೯ ಬೌಲ್‌ಗೆ ೩, ರನ್ ಹೊಡೆದರು. ಸಂತ ಜೋಸೆಫ್ ತಂಡದ ಬೌಲರ್ ಹಾರ್ದಿಕ್ ೪ ವಿಕೆಟ್ ತೆಗೆದು ಮಿಂಚಿದರೆ, ಜಶ್ವಿತ್, ದಿಗಂತ್, ಸೂರ್ಯ ತಲಾ ೧ ವಿಕೆಟ್, ಗಗನ್ ೨ ವಿಕೆಟ್ ಪಡೆದುಕೊಂಡರು.

ಗುರಿ ಬೆನ್ನತ್ತಿದ್ದ ಸಂತ ಜೋಸೆಫ್ ತಂಡ ೧೯.೨ ಓವರ್‌ಗಳಲ್ಲಿಯೇ ೬ ವಿಕೆಟ್ ಕಳೆದುಕೊಂಡು ೧೧೨ ರನ್ ಕಲೆ ಹಾಕಿ ಚಾಂಪಿಯನ್ ಸ್ಥಾನಕ್ಕೆ ಮುತ್ತಿಕ್ಕಿತು.

(ಮೊದಲ ಪುಟದಿಂದ) ತಂಡದ ಪರ ಜಶ್ವಿತ್ ೧೫ ಬೌಲ್‌ಗೆ ೨೧ ರನ್, ದಿಗಂತ್ ೩೩ ಬೌಲ್‌ಗೆ ೨೮ ರನ್ ಪೇರಿಸಿ ತಂಡದ ಮೊತ್ತ ಹೆಚ್ಚಾಗಲು ನೆರವಾದರು. ಇನ್ನೂ ಸೂರ್ಯ ೨೦ ಬೌಲ್‌ಗೆ ೯, ಹಾರ್ದಿಕ್ ೪ ಬೌಲ್‌ಗೆ ೩, ನಿಶಾಂತ್ ೨೩ ಬೌಲ್‌ಗೆ ೭, ಪವನ್ ೪ ಬೌಲ್‌ಗೆ ೨, ಸಾತ್ವಿಕ್ ೩ ಬೌಲ್‌ಗೆ ೩, ಗಾಯನ್ ೫ ಬಾಲ್‌ಗೆ ೬ ರನ್ ಗಳಿಸಿದರು. ಕೊಡಗು ವಿದ್ಯಾಲಯದ ಎಸೆತಗಾರರಾದ ಯಶ್ ೨ ವಿಕೆಟ್, ಕಾಶಿಫ್, ಮುಶ್ರಫ್, ಚೆಂಗಪ್ಪ, ನಮನ್ ತಲಾ ೧ ವಿಕೆಟ್ ಪಡೆದರು.

ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿಫೈನಲ್ ಪಂದ್ಯಾವಳಿ ಯಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯನ್ನು ಮಣಿಸಿ ಕೊಡಗು ವಿದ್ಯಾಲಯ, ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆ ತಂಡವನ್ನು ಸೋಲಿಸಿ ಸಂತ ಜೋಸೆಫರ ಶಾಲೆ ಫೈನಲ್ ಪ್ರವೇಶಿಸಿತ್ತು. ಒಟ್ಟು ೧೨ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಸಭಾ ಕಾರ್ಯಕ್ರಮ

ಫೈನಲ್ ಪಂದ್ಯಾಟದ ಬಳಿಕ ನಡೆದ ಬಹುಮಾನ ವಿತರಣೆಯಲ್ಲಿ ವೀರಾಜಪೇಟೆಯ ವೈದ್ಯ ಡಾ. ಕಾರ್ಯಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭ ಬಿಸಿಸಿಐ ತರಬೇತುದಾರ ರೆನ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಮಂಗಳೂರು ವಿಭಾಗದ ಸಂಚಾಲಕ ರತನ್ ಕುಮಾರ್, ಮಾಜಿ ಸಂಚಾಲಕ ಮನೋಹರ್ ಅಮೀನ್, ಅಂತರರಾಷ್ಟಿçÃಯ ಕ್ರಿಕೆಟ್ ಕೆ.ಎಲ್. ರಾಹುಲ್ ಅವರ ಮುಖ್ಯ ತರಬೇತುದಾರ ಜಯರಾಜ್, ಕ್ರಿಕೆಟ್ ಪಂದ್ಯಾವಳಿ ಆಯೋಜಕ ಕೋಡಿಮಣಿಯಂಡ ರಘು ಮಾದಪ್ಪ, ಕೊಡಗು ವಿದ್ಯಾಲಯದ ಕ್ರೀಡಾ ತರಬೇತುದಾರ ದಾಮೋದರ್, ಸಂಚಾರ ವಿಭಾಗದ ಪೊಲೀಸ್ ಸಹಾಯಕ ನಿರೀಕ್ಷಕ ನಂದಾ, ಪ್ರಮುಖರಾದ ರಮೇಶ್, ಹರೀಶ್, ಸುರೇಶ್, ನಂದಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.