ಪೊನ್ನಂಪೇಟೆ, ನ. ೧೩: ಪೊನ್ನಂಪೇಟೆ ಕುಂದ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದಲ್ಲಿ ಹುಂಡಿಯನ್ನು ಒಡೆದು ಹಣ ಕಳವು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಸಂಜೆ ೪:೩೦ ರ ಸಮಯದಲ್ಲಿ ಕಳ್ಳನೊಬ್ಬ ದೇವಸ್ಥಾನದ ಒಳನುಗ್ಗಿ ಭಂಡಾರ ಪೆಟ್ಟಿಗೆಯನ್ನು ಒಡೆಯಲು ಯತ್ನಿಸಿದ್ದಾನೆ. ಈ ಸಂದರ್ಭ ನಾಯಿಗಳು ಬೊಗಳುವ ಶಬ್ದಕೇಳಿ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಅತ್ತ ಗಮನಿಸಿದಾಗ ಕಳ್ಳ ದೇವಸ್ಥಾನದ ಹಿಂಭಾಗದ

(ಮೊದಲ ಪುಟದಿಂದ) ತೋಟಕ್ಕೆ ಓಡಿಹೋಗಿ ಪರಾರಿಯಾಗಿದ್ದಾನೆ. ವಿಷಯ ತಿಳಿದ ಪೊನ್ನಂಪೇಟೆ ಪೊಲೀಸರು ದೇವಸ್ಥಾನ ಹಿಂಭಾಗದ ತೋಟದಲ್ಲಿ ಕಳ್ಳನಿಗಾಗಿ ಹುಡುಕಾಟ ನಡೆಸಿದರೂ ಕಳ್ಳನ ಸುಳಿವು ಪತ್ತೆಯಾಗಿಲ್ಲ. ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ದೇವಸ್ಥಾನಗಳ ಗಂಟೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಹುಂಡಿಯನ್ನು ಒಡೆಯುವ ಪ್ರಕರಣ ಕೂಡ ನಡೆದಿದ್ದು, ಪೊಲೀಸರು ಕೂಡಲೇ ಕಳ್ಳರನ್ನು ಪತ್ತೆಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.