ಸೋಮವಾರಪೇಟೆ, ನ. ೧೧: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ನಿರ್ಧರಿಸಲಾಗಿದ್ದು, ಈ ಬಗ್ಗೆ ರೂಪುರೇಷೆ ಸಿದ್ದಪಡಿಸಲು ತಾ. ೧೩ರಂದು ಮಡಿಕೇರಿಯಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ನೌಕರರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತು ರೂಪುರೇಷೆ ಸಿದ್ದಪಡಿಸಲು ತಾ. ೧೩ರಂದು ಬೆಳಿಗ್ಗೆ ೧೦.೩೦ಕ್ಕೆ ಮಡಿಕೇರಿಯ ಟೌನ್ಹಾಲ್ನಲ್ಲಿ ನೌಕರರ ಸಭೆ ನಡೆಯಲಿದೆ ಎಂದರು.
ರಾಜ್ಯ ಸರಕಾರ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡಲು ಇದುವರೆಗೂ ಕ್ರಮ ಕೈಗೊಂಡಿಲ್ಲ. ಎಲ್ಲಾ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿಲ್ಲ. ಎಲ್ಲಾ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಲಿಲ್ಲ. ಕಾರ್ಮಿಕ ಇಲಾಖೆಯ ಕಾನೂನು ಪ್ರಕಾರ ಐದು ವರ್ಷಗಳ ನಂತರ ವೇತನ ಪರಿಷ್ಕರಣೆಯಾಗಬೇಕು. ೨೦೧೬ರಿಂದ ಕನಿಷ್ಟ ವೇತನ ಪಡೆದುಕೊಂಡಿರುವವರಿಗೆ ಇದುವರೆಗೂ ವೇತನ ಹೆಚ್ಚು ಮಾಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಗ್ರಾಮ ಪಂಚಾಯಿತಿ ಗಳಲ್ಲಿ ೨೦೦ರಷ್ಟು ಹುದ್ದೆಗಳು ಖಾಲಿ ಇವೆ. ಈಗಿರುವ ನೌಕರರಿಗೆ ಹೆಚ್ಚು ಕೆಲಸ ನೀಡುತ್ತಿದ್ದು, ಇತರ ಇಲಾಖೆಗಳ ಕೆಲಸವನ್ನೂ ವಹಿಸುತ್ತಿದ್ದಾರೆ. ನಮ್ಮಿಂದ ಹೆಚ್ಚು ಕೆಲಸ ಪಡೆದುಕೊಂಡು ಕಡಿಮೆ ವೇತನ ನೀಡುವ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು.
ಈಗಿನ ಸರ್ಕಾರದಲ್ಲಿ ಪಂಚಾಯತ್ರಾಜ್ ಇಲಾಖೆಗೆ ಸಚಿವರೇ ಇಲ್ಲ ಎಂದು ವ್ಯಂಗ್ಯವಾಡಿದ ಅವರು, ೩೧.೧೦.೨೦೧೭ರವರೆಗೆ ನೇಮಕಗೊಂಡ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಜಿಲ್ಲಾ ಪಂಚಾಯಿತಿ ಅನುಮೋದನೆಗೊಳಿಸಬೇಕೆಂದು ಆಗ್ರಹಿಸಿದರು.
ತಾ. ೧೩ರಂದು ನಡೆಯುವ ಸಭೆಗೆ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ನಾಡೇಗೌಡ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸೇರಿದಂತೆ ಇತರ ಮುಖಂಡರು, ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳ ನೌಕರರು ಭಾಗವಹಿಸಲಿದ್ದಾರೆ ಎಂದು ಭರತ್ ತಿಳಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಚ್.ಜಿ. ನವೀನ್ಕುಮಾರ್, ಪದಾಧಿಕಾರಿಗಳಾದ ಎಸ್.ಆರ್. ಮಹಾಲಿಂಗ, ಎಲ್.ಎನ್. ಮೋಹನ್ಕುಮಾರ್, ಎಸ್.ಈ. ಭಾಗ್ಯ ಉಪಸ್ಥಿತರಿದ್ದರು.