ಕುಶಾಲನಗರ, ನ. ೧೧: ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಎಲ್ಲಾ ದೇವಾಲಯಗಳ ರಕ್ಷಣೆ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವ ಮೂಲಕ ಯಾವುದೇ ರೀತಿಯ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಸೋಮವಾರ ಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ತಿಳಿಸಿದರು.

ಕುಶಾಲನಗರ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಕುಶಾಲನಗರ ಪಟ್ಟಣದ ದೇವಾಲಯ ಒಕ್ಕೂಟದ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರೂ ಪೊಲೀಸ್ ಇಲಾಖೆ ಜೊತೆ ಕೈಜೋಡಿಸುವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ದೇವಾಲಯಗಳ ವಾರ್ಷಿಕೋತ್ಸವ, ಜಾತ್ರೆ, ಮೆರವಣಿಗೆ ಸಂದರ್ಭ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಈ ಸಂದರ್ಭ ತಮ್ಮ ಇಲಾಖೆ ಮೂಲಕ ಎಲ್ಲಾ ರೀತಿಯ ರಕ್ಷಣೆ ಕಲ್ಪಿಸಲಾಗುವುದು ಎಂದರು.

ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ಮಾತನಾಡಿ, ದೇವಾಲಯಗಳಲ್ಲಿ ಯಾವುದೇ ರೀತಿಯ ಕಳ್ಳತನ, ಮತ್ತಿತರ ಘಟನೆಗಳು ಸಂಭವಿಸದAತೆ ಆಡಳಿತ ಮಂಡಳಿಗಳು ಸದಾ ಎಚ್ಚರದಿಂದ ಇರಬೇಕು. ದೇವಾಲಯಗಳಲ್ಲಿ ಕಾಣಿಕೆ ಡಬ್ಬಗಳಲ್ಲಿ ಸಂಗ್ರಹವಾಗುವ ನಗದನ್ನು ಮತ್ತು ಚಿನ್ನಾಭರಣಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ದೇವಾಲಯಗಳ ವಾರ್ಷಿಕ ಉತ್ಸವ, ಜಾತ್ರೆಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಗಂಗಾಧರಪ್ಪ, ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಸಭೆಯಲ್ಲಿ ಕುಶಾಲನಗರ ಪಟ್ಟಣದ ಠಾಣಾಧಿಕಾರಿ ಅಪ್ಪಾಜಿ, ಪ್ರೊಬೆಷನರಿ ಎಸ್.ಐ. ಕಾಶಿನಾಥ್, ದೇವಾಲಯಗಳ ಒಕ್ಕೂಟದ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಉಪಾಧ್ಯಕ್ಷ ವಿ.ಎನ್. ವಸಂತ್ ಕುಮಾರ್, ಬಿ.ಎಲ್. ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ವಿವಿಧ ದೇವಾಲಯಗಳ ಅಧ್ಯಕ್ಷರು, ಪ್ರತಿನಿಧಿಗಳು ಇದ್ದರು.