ಕುಶಾಲನಗರ, ನ.೧೧: ತೂಗು ಸೇತುವೆ ನಿರ್ವಹಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿರುವ ಅರಣ್ಯ ಇಲಾಖೆ ಇದೀಗ ಪ್ರವಾಸಿಗರಿಗೆ ಕಾವೇರಿ ನಿಸರ್ಗಧಾಮಕ್ಕೆ ತೆರಳಲು ತಾತ್ಕಾಲಿಕ ಪರ್ಯಾಯ ಮಾರ್ಗ ನಿರ್ಮಿಸಲು ಚಿಂತನೆ ಹರಿಸಿದೆ.

ತಾ. ೮ ರಿಂದ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಾರ್ಗದ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಪ್ರವಾಸಿಗರಿಗೆ ನಿಸರ್ಗಧಾಮಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿಶಿವರಾಮ್ ಪ್ರತಿಕ್ರಿಯೆ ನೀಡಿದ್ದಾರೆ.

ತೂಗು ಸೇತುವೆ ನಿರ್ವಹಣೆ ಕಾಮಗಾರಿಗೆ ಅಗತ್ಯವಿರುವ ಕೆಲವು ಸಾಮಾಗ್ರಿಗಳು ವಿದೇಶದಿಂದ ಇನ್ನಷ್ಟೇ ಬರಬೇಕಾಗಿದೆ ಎಂದು ತಿಳಿಸಿರುವ ಶಿವರಾಮ್, ಆದಷ್ಟು ಬೇಗನೆ ತೂಗು ಸೇತುವೆ ನಿರ್ವಹಣೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆಯುತ್ತಿದೆ. ನದಿಯಲ್ಲಿ ನೀರಿನ ಹರಿವು ಕ್ಷೀಣಗೊಂಡಿದ್ದು, ತಾತ್ಕಾಲಿಕವಾಗಿ ನದಿಗೆ ಅಡ್ಡಲಾಗಿ ದಾಟಲು ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

-ಚಂದ್ರಮೋಹನ್