ಸೋಮವಾರಪೇಟೆ, ನ. ೯: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರ್ಕೆಟ್ ಏರಿಯಾದಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆಗಳು ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಸರ್ಕಾರದಿಂದ ರೂ. ೫ ಕೋಟಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಈಗಾಗಲೇ ಮಾರುಕಟ್ಟೆಯಲ್ಲಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯ ನಡೆಯುತ್ತಿದ್ದು, ಇದು ಪೂರ್ಣಗೊಂಡ ತಕ್ಷಣ ರೂ. ೫ ಕೋಟಿ ವೆಚ್ಚದಲ್ಲಿ ನೆಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಹಾಗು ಮೊದಲನೇ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿಯಲ್ಲಿ ಸರ್ವೆಯರ್ ಇಲ್ಲದೇ ಇರುವುದರಿಂದ ಭೂ ಸಂಬAಧಿತ ಕೆಲಸ ಕಾರ್ಯಗಳು ಶೀಘ್ರಗತಿಯಲ್ಲಿ ನಡೆಯುತ್ತಿಲ್ಲ. ಈ ಹಿನ್ನೆಲೆ ಖಾಸಗಿ ಸರ್ವೆಯರ್‌ಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಸದಸ್ಯ ಎಸ್. ಮಹೇಶ್ ಮನವಿ ಮಾಡಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕರು ತಿಳಿಸಿದರು. ಪಟ್ಟಣ ಪಂಚಾಯಿತಿಯ ಗಡಿ ಗುರುತಿಗೆ ಸಂಬAಧಿಸಿದAತೆ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಇದರಿಂದಾಗಿ ಪಟ್ಟಣಕ್ಕೆ ಬರಬೇಕಾದ ಆದಾಯವು ನೆರೆಯ ಗ್ರಾ.ಪಂ.ಗಳಿಗೆ ಹೋಗುತ್ತಿದೆ. ಪಟ್ಟಣ ಪಂಚಾಯಿತಿಯಿAದ ಮೂಲಭೂತ ಸೌಕರ್ಯ ಪಡೆದುಕೊಂಡು ಬಾಡಿಗೆಯನ್ನು ಗ್ರಾ.ಪಂ.ಗಳಿಗೆ ಕಟ್ಟುತ್ತಿದ್ದಾರೆ. ಈ ಹಿನ್ನೆಲೆ ಆದಷ್ಟು ಶೀಘ್ರವಾಗಿ ಪ.ಪಂ. ಗಡಿ ಗುರುತಿಗೆ ಕ್ರಮ ಕೈಗೊಳ್ಳಬೇಕೆಂದು ಮಹೇಶ್ ಮನವಿ ಮಾಡಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ, ಸರ್ವೆ ಮಾಡಲು ಕ್ರಮ ವಹಿಸುವುದಾಗಿ ಸಭೆಯಲ್ಲಿದ್ದ ತಹಶೀಲ್ದಾರ್ ನರಗುಂದ್ ತಿಳಿಸಿದರು. ಕಳೆದ ೨ ವರ್ಷದಿಂದಲೂ ಈ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಕ್ರಮ ವಹಿಸುವಂತೆ ಎಸ್. ಮಹೇಶ್ ಮನವಿ ಮಾಡಿದರು.
ಹೊಸಬಡಾವಣೆಯಲ್ಲಿ ನಕಲಿ ಹಕ್ಕುಪತ್ರ ನೀಡಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸದಸ್ಯರಾದ ಮಹೇಶ್, ಶೀಲಾ ಡಿಸೋಜ ಅವರುಗಳು ಸಭೆಯ ಗಮನಕ್ಕೆ ತಂದರು. ಪಟ್ಟಣ ಪಂಚಾಯಿತಿಯಲ್ಲಿ ನಿರ್ಮಿಸಿರುವ ಚರಂಡಿಗಳನ್ನು ಕಿತ್ತು ಕೆಇಬಿಯವರು ಮನಸೋಯಿಚ್ಛೆ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದಾರೆ. ಒಡೆದುಹಾಕಿರುವ ಚರಂಡಿಯನ್ನು ಅವರೇ ದುರಸ್ತಿ ಪಡಿಸಿಕೊಡಬೇಕೆಂದು ಸಭೆಯಲ್ಲಿದ್ದ ಸದಸ್ಯರು ಆಗ್ರಹಿಸಿದರು.
ಪಟ್ಟಣದಲ್ಲಿ ಶಿಥಿಲಾವಸ್ಥೆ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ಆದಷ್ಟು ಶೀಘ್ರವಾಗಿ ಬದಲಾವಣೆ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬAಧಿತ ಕಾಮಗಾರಿ ಕೈಗೊಳ್ಳುವ ಸಂದರ್ಭ ಆಡಳಿತ ಮಂಡಳಿಯ ಗಮನಕ್ಕೆ ತರಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಅವರು ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.
ಸುಲಭ್ ಶೌಚಾಲಯ: ಪಟ್ಟಣದ ಹಲವಷ್ಟು ಅಂಗಡಿ ಮುಂಗಟ್ಟು, ಕಚೇರಿಗಳಲ್ಲಿ ಕೆಲಸ ಮಾಡುವ ಯುವಕ/ಯುವತಿಯರು ಶೌಚಾಲಯಕ್ಕೆ ಪರದಾಡುವಂತಾಗಿದೆ. ಈ ಹಿನ್ನೆಲೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಸ್ಥಳದಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಆಸ್ತಿಯಿದ್ದು, ಈ ಜಾಗದಲ್ಲಿ ಸುಲಭ್ ಶೌಚಾಲಯ ನಿರ್ಮಿಸಬೇಕೆಂದು ಸದಸ್ಯ ಮೃತ್ಯುಂಜಯ ಸಭೆಯ ಗಮನ ಸೆಳೆದರು.
ಈ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ಹೈಟೆಕ್ ಮಾದರಿಯಲ್ಲಿ ಸುಲಭ್ ಶೌಚಾಲಯ ನಿರ್ಮಿಸಲು ಕ್ರಮ ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯಿತಿ ಕಚೇರಿ ಎದುರು ಉದ್ಯಾನವನ ನಿರ್ಮಾಣ ಎಂದು ರೂ. ೧.೨೯ ಲಕ್ಷ ಹಣ ನೀಡಲಾಗಿದೆ. ಆದರೆ ಉದ್ಯಾನವನದ ಸ್ವರೂಪವೇ ಕಾಣುತ್ತಿಲ್ಲ ಎಂದು ಸದಸ್ಯೆ ಶೀಲಾ ಡಿಸೋಜ ಪ್ರಶ್ನಿಸಿದರು.
ಉದ್ಯಾನವನದಲ್ಲಿ ಈಗಾಗಲೇ ಗೋಡೆ, ಕಾಂಪೌAಡ್ ನಿರ್ಮಿಸಿದ್ದು, ಇಂಟರ್‌ಲಾಕ್ ಅಳವಡಿಸಲಾಗಿದೆ. ಕೆಲವು ಗಿಡಗಳನ್ನು ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ನಿರ್ವಹಣೆ ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು.
ಹೈಟೆಕ್ ಮಾರುಕಟ್ಟೆಯ ಒಂದು ಬದಿಯಲ್ಲಿ ಅವಶ್ಯಕತೆ ಇಲ್ಲದಿದ್ದರೂ ರೂ. ೪ ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಿದ ಸ್ಥಳದಲ್ಲಿ ಕೆಲಸ ಮಾಡದೇ ತಮಗಿಷ್ಟ ಬಂದ ಕಡೆಯಲ್ಲಿ ಕಳಪೆ ಗುಣಮಟ್ಟದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿ, ಗುಣಮಟ್ಟ ಪರಿಶೀಲಿಸಿದ ನಂತರವಷ್ಟೇ ಬಿಲ್ ನೀಡಬೇಕೆಂದು ಶೀಲಾ ಡಿಸೋಜ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಗುಣಮಟ್ಟ ನಿಯಂತ್ರಕ ಅಭಿಯಂತರರಿಗೆ ಪತ್ರ ಬರೆದು ಪರಿಶೀಲನೆ ನಡೆಸಿದ ನಂತರ ಬಿಲ್ ನೀಡಲು ಕ್ರಮವಹಿಸುವಂತೆ ಸೂಚಿಸಿ ಸಭೆಯಿಂದ ನಿರ್ಗಮಿಸಿದರು. ನಂತರ ಇದೇ ವಿಷಯದ ಬಗ್ಗೆ ಚರ್ಚೆ ನಡೆದು, ‘ಕಾಮಗಾರಿ ಪರಿಶೀಲಿಸಿ ಬಿಲ್ ನೀಡುವ ಬಗ್ಗೆ ನಿರ್ಣಯ ಮಾಡಬೇಕೆಂದು’ ಶೀಲಾ ಡಿಸೋಜ ಒತ್ತಾಯಿಸಿದರು. ಈ ಸಂದರ್ಭ ಸದಸ್ಯ ಬಿ.ಆರ್. ಮಹೇಶ್ ಮಧ್ಯೆ ಪ್ರವೇಶಿಸಿ ‘ಕೆಲಸ ಸರಿಯಾಗಿಯೇ ಇದೆ, ಕಾಮಗಾರಿ ಪರಿಶೀಲಿಸಲು ಥರ್ಡ್ ಪಾರ್ಟಿಯ ಒಪ್ಪಿಗೆ ಪಡೆಯಬೇಕೆಂಬ ರೂಲ್ಸ್ ಇಲ್ಲ’ ಎಂದರು.
ಇವರ ಮಾತಿನಿಂದ ಸಭೆಯಲ್ಲಿ ಮತ್ತೆ ಗೊಂದಲ ಉಂಟಾಯಿತು. ಶೀಲಾ ಡಿಸೋಜ ಮತ್ತು ಬಿ.ಆರ್. ಮಹೇಶ್ ನಡುವೆ ಏರುದನಿಯಲ್ಲಿ ಪದಗಳ ವಿನಿಮಯವಾಯಿತು. ಅಂತಿಮವಾಗಿ ಗುಣಮಟ್ಟ ನಿಯಂತ್ರಣ ಅಧಿಕಾರಿಯಿಂದ ಪರಿಶೀಲನೆ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಬೇಕು. ಎಲ್ಲಾ ವಾರ್ಡ್ಗಳಿಗೂ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯರುಗಳು ಸಭೆಯಲ್ಲಿ ಒತ್ತಾಯಿಸಿದರು. ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಉಪಾಧ್ಯಕ್ಷ ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ನಾಗರತ್ನ, ವೆಂಕಟೇಶ್, ಶುಭಕರ್, ಮೋಹಿನಿ, ಜೀವನ್, ಸೋಮೇಶ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.