ಸಿದ್ದಾಪುರ, ನ. ೯: ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕೃಷ್ಣಾಪುರ ಗ್ರಾಮದ ಕೃಷಿಕ ಸತ್ಯನಾರಾಯಣ ಎಂಬವರ ಗದ್ದೆಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ಸಂಪೂರ್ಣ ಫಸಲನ್ನು ನಾಶ ಮಾಡಿದೆ.ಮುಂದಿನ ತಿಂಗಳು ಕೊಯ್ಲಿಗೆ ತಯಾರಾಗಿದ್ದ ಭತ್ತ ಕಾಡಾನೆಯ ಹೊಟ್ಟೆ ಸೇರಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಸತ್ಯ ನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಕೊರತೆ, ದುಬಾರಿ ನಿರ್ವಹಣಾ ವೆಚ್ಚ ಮತ್ತು ವನ್ಯಜೀವಿಗಳ ದಾಳಿಯಿಂದ ಭತ್ತದ ಕೃಷಿಯನ್ನು ಕೈಬಿಡುವವರ ಸಂಖ್ಯೆ ಈ ಭಾಗದಲ್ಲಿ ಹೆಚ್ಚಾಗುತ್ತಿದ್ದು, ಆತಂಕಕಾರಿ ಬೆಳವಣಿಗೆಯಾಗಿದೆ.

ಕೋತಿಗಳ ಕಾಟ

ಕಾಡಾನೆಗಳ ಉಪಟಳ ಒಂದೆಡೆಯಾದರೆ ಇದೀಗ ನೂರಾರು ಕೋತಿಗಳು ತೋಟಗಳಿಗೆ ದಾಳಿ ಮಾಡಲು ಆರಂಭಿಸಿವೆ. ಗಿಡಗಳಲ್ಲಿ ಕಾಫಿ ಹಣ್ಣಾಗಿರುವುದರಿಂದ ಹಿಂಡು ಹಿಂಡು ಕೋತಿಗಳು ತೋಟಗಳಲ್ಲಿ ಬೀಡುಬಿಟ್ಟು ಹಣ್ಣು ತಿನ್ನುತ್ತಿವೆ. ಅಲ್ಲದೆ ಗಿಡಗಳನ್ನು ನಾಶ ಮಾಡುತ್ತಿವೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಅರೇಬಿಕಾ ಕಾಫಿಗೆ ಉತ್ತಮ ಬೆಲೆ ಬಂದಿರುವ ಬೆನ್ನಲ್ಲೇ ಕೋತಿಗಳ ಕಾಟ ಬೆಳೆಗಾರರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆ ವನ್ಯಜೀವಿ ಉಪಟಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ