ಮಡಿಕೇರಿ, ನ. ೯: ೨೦೧೫ ನವೆಂಬರ್ ೧೦ ರಂದು ಮಡಿಕೇರಿ ಯಲ್ಲಿ ಟಿಪ್ಪು ಜಯಂತಿ ಸಂದರ್ಭ ಜಿಲ್ಲಾ ವಿ.ಹೆಚ್.ಪಿ. ಮುಖಂಡರಾಗಿದ್ದ ದೇವಪ್ಪಂಡ ಕುಟ್ಟಪ್ಪ ಅವರು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಹತ್ಯೆಗೀಡಾಗಿದ್ದರು. ಕುಟ್ಟಪ್ಪ ಅವರ ಬಲಿದಾನದ ಸ್ಮರಣೆಯನ್ನು ಹಿಂದು ಜಾಗರಣ ವೇದಿಕೆಯು ಪ್ರತೀವರ್ಷ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ತಾ. ೧೦ರ ಬೆಳಿಗ್ಗೆ ೯ ಗಂಟೆಗೆ ಕುಟ್ಟಪ್ಪ ಅವರ ಹುಟ್ಟೂರಾದ ಮಾದಾಪುರದಲ್ಲಿ ಅಲ್ಲಿನ ಶ್ರೀ ಗಣಪತಿ ದೇವಾಲಯದಲ್ಲಿ ಮೃತರ ಆತ್ಮಕ್ಕೆ ಶಾಂತಿಕೋರಿ ಪೂಜೆ ಸಲ್ಲಿಸಿದ ನಂತರ ೧೦ ಗಂಟೆಗೆ ‘ಕುಟ್ಟಪ್ಪಾಜಿ ಪುಣ್ಯಸ್ಮರಣೆ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.