ಸೋಮವಾರಪೇಟೆ, ನ. ೭: ತಾಲೂಕಿನ ಗಡಿಯಾಗಿರುವ ಕೊಡ್ಲಿಪೇಟೆಯಿಂದ ತಾಲೂಕು ಕೇಂದ್ರವಾಗಿರುವ ಸೋಮವಾರಪೇಟೆ ವರೆಗಿನ ರಾಜ್ಯ ಹೆದ್ದಾರಿಯ ಸಂಪೂರ್ಣ ಅಭಿವೃದ್ಧಿಗೆ ಕೊನೆಗೂ ಕಾಲಕೂಡಿ ಬಂದಿದ್ದು, ರೂ. ೧೨ ಕೋಟಿ ವೆಚ್ಚದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಅಂತರ್‌ಜಿಲ್ಲಾ ಸಂಪರ್ಕ ರಸ್ತೆಯಾದ ಮಡಿಕೇರಿ-ಸೋಮವಾರಪೇಟೆ-ಕೊಡ್ಲಿಪೇಟೆ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ೧೨ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣ ಗೊಂಡಿರುವ ಹಿನ್ನೆಲೆ ಶಾಸಕರು ಆಯ್ದ ಕಡೆಗಳಲ್ಲಿ ಭೂಮಿ ಪೂಜೆ ನೆರವೇರಿಸಿದರು.
ನೆರೆಯ ಹಾಸನ ಜಿಲ್ಲೆಯ ಗಡಿಯನ್ನು ಹೊಂದಿಕೊAಡಿರುವ ಕೊಡಗಿನ ಕೊಡ್ಲಿಪೇಟೆವರೆಗೆ ಹಾಸನ ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ಸುಸಜ್ಜಿತ ಡಾಂಬರು ರಸ್ತೆ ನಿರ್ಮಾಣವಾಗಿದೆ. ಆದರೆ ಕೊಡಗಿನ ಕೊಡ್ಲಿಪೇಟೆಯಿಂದ ಈ ರಾಜ್ಯ ಹೆದ್ದಾರಿ ಗುಂಡಿಮಯವಾಗಿದ್ದು, ಸಂಚಾರ ದುಸ್ತರವಾಗಿದೆ.
ಕೊಡ್ಲಿಪೇಟೆಯಿಂದ ಸೋಮವಾರಪೇಟೆವರೆಗಿನ ೩೦ ಕಿ.ಮೀ. ಅಂತರವನ್ನು ತಲುಪಲು ತ್ರಾಸದಾಯಕ ಪ್ರಯಾಣವಾಗಿದ್ದು, ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸುವುದು ಸರ್ಕಸ್‌ನಷ್ಟೇ ಕಷ್ಟಸಾಧ್ಯ. ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಅನೇಕಬಾರಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದು, ಕಳೆದ ವರ್ಷವಷ್ಟೇ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಮಾಡಲಾಗಿದೆ.
ಉಳಿದಂತೆ ರಾಜ್ಯ ಹೆದ್ದಾರಿ ಹಾದುಹೋಗಿರುವ ಗೌಡಳ್ಳಿ, ಮೂದ್ರವಳ್ಳಿ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ರಸ್ತೆಯನ್ನು ಹಾಗೆಯೇ ಬಿಡಲಾಗಿದ್ದು, ಈ ಹಿಂದೆ ಇದ್ದ ಗುಂಡಿಗಳು ಇನ್ನಷ್ಟು ಹಿಗ್ಗಿ ಸಂಚಾರ ದುಸ್ತರವಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳೊಂದಿಗೆ ಶಾಲಾ ಕಾಲೇಜು ವಾಹನಗಳು, ಸಾರ್ವಜನಿಕ ವಾಹನಗಳು ಸಂಚರಿಸುತ್ತಿವೆ. ಇದರೊಂದಿಗೆ ಹಾಸನ, ಮಂಗಳೂರು ಸೇರಿದಂತೆ ಇತರೆಡೆಗೆ ತೆರಳಲು ಈ ರಸ್ತೆಯೇ ಪ್ರಮುಖವಾಗಿದ್ದು, ಕಳೆದ ಅನೇಕ ವರ್ಷಗಳಿಂದ ನಿರ್ವಹಣೆಯ ಕೊರತೆ ಎದುರಿಸುತ್ತಿತ್ತು.
ಇದೀಗ ಲೋಕೋಪಯೋಗಿ ಇಲಾಖೆಯಿಂದ ೧೨ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಾಸಕ ಅಪ್ಪಚ್ಚು ರಂಜನ್ ಅವರು ಗೌಡಳ್ಳಿ, ಮೂದ್ರವಳ್ಳಿ ಹಾಗೂ ಕೊಡ್ಲಿಪೇಟೆ
(ಮೊದಲ ಪುಟದಿಂದ) ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಮಗಾರಿಯಲ್ಲಿ ಯಾವುದೇ ಕಳಪೆಯಾಗದಂತೆ ಅಭಿಯಂತರರು ಗಮನ ಹರಿಸಬೇಕು. ಕಾಮಗಾರಿ ಕಳಪೆಯಾದರೆ ಅಭಿಯಂತರರು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ರಸ್ತೆಗಳು ಅಭಿವೃದ್ಧಿಯಾದರೆ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಕೊಡಗಿನ ಹವಾಮಾನವನ್ನು ಗಮನಲ್ಲಿಟ್ಟುಕೊಂಡು ಅತೀ ಹೆಚ್ಚು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಅಭಿಯಂತರ ವೆಂಕಟೇಶ್ ನಾಯಕ್, ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯರಾದ ಲಾವಣ್ಯ, ಕುಮಾರ್, ಮೋಕ್ಷಿಕ್‌ರಾಜ್, ಪ್ರಮುಖರಾದ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.