ಸೋಮವಾರಪೇಟೆ, ನ. ೭: ತಾಲೂಕಿನ ಹರಗ ಗ್ರಾಮದಲ್ಲಿ ಪೈಸಾರಿ ಜಾಗದಲ್ಲಿ ಕಾಫಿ ತೋಟ ನಿರ್ಮಿಸಿದ್ದು, ಅರಣ್ಯ ಇಲಾಖೆ ಏಕಾಏಕಿ ಕಾರ್ಯಾಚರಣೆ ನಡೆಸಿ ಕಾಫಿ ಗಿಡಗಳನ್ನು ಕಿತ್ತು ಹಾಕಿದೆ ಎಂದು ಆರೋಪಿಸಿ ಹರಗ ಗ್ರಾಮಸ್ಥರು ಅರಣ್ಯ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಹರಗ ಗ್ರಾಮದ ಕೆ.ಎಂ. ಲಿಂಗರಾಜು ಅವರು ಸರ್ಕಾರಿ ಜಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದು, ಇತ್ತೀಚೆಗಷ್ಟೇ ಹೊಸದಾಗಿ ಕಾಫಿ ಗಿಡಗಳನ್ನು ಹಾಕಿದ್ದರು. ಈ ನಡುವೆ ಕಳೆದ ಕೆಲ ವರ್ಷಗಳ ಹಿಂದೆಯೇ ಅಕ್ರಮ ಸಕ್ರಮ ಸಮಿತಿಗೆ ಫಾರಂ ೫೭ರಡಿ ಅರ್ಜಿ ಸಲ್ಲಿಸಿ, ಭೂ ಮಂಜೂರಾತಿಗೆ ಮನವಿ ಮಾಡಿದ್ದರು.
ಅನುಭವ ಸ್ವಾಧೀನದಲ್ಲಿದ್ದ ಈ ಜಾಗದಲ್ಲಿ ಕಾಫಿ ತೋಟ ನಿರ್ಮಿಸಿದ್ದ ಲಿಂಗರಾಜು ಅವರು ಕಳೆದ ವಾರ ಹೊಸದಾಗಿ ೯೦೦ ಕಾಫಿ ಗಿಡಗಳನ್ನು ನೆಟ್ಟಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಿಢೀರ್ ಕಾರ್ಯಾಚರಣೆ ನಡೆಸಿ, ೯೦೦ ಕಾಫಿ ಗಿಡಗಳನ್ನು ಕಿತ್ತು ಕೃಷಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ಸೋಮವಾರಪೇಟೆಯ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಹರಗ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ. ಧರ್ಮಪ್ಪ ಅವರು, ಪೈಸಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದರೆ ಅಂತಹ ಜಾಗವನ್ನು ಸಕ್ರಮಗೊಳಿಸಲು ಸರ್ಕಾರವೇ ಆದೇಶ ನೀಡಿದೆ. ಈ ಪ್ರಕ್ರಿಯೆಯಡಿ ಲಿಂಗರಾಜು ಅವರು ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆ ಗಿಡಗಳನ್ನು ಕಿತ್ತು ದರ್ಪ ಮೆರೆದಿರುವುದು ಖಂಡನೀಯ ಎಂದರು.
ಕೃಷಿಕರಿಗೆ ಯಾವುದೇ ಮಾಹಿತಿ ಅಥವಾ ನೋಟೀಸ್ ನೀಡದೆ ಅರಣ್ಯ ಇಲಾಖೆ ಗಿಡಗಳನ್ನು ಕಿತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಚರಣೆಗೆ ಇಳಿದರೆ ತಕ್ಕ ಪ್ರತಿರೋಧ ಎದುರಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಈ ಸಂದರ್ಭ ಮಾತನಾಡಿದ ಡಿಆರ್‌ಎಫ್‌ಓ ಸತೀಶ್ ಅವರು, ಸರ್ಕಾರದ ಆದೇಶದ ಅನ್ವಯ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು. ಈ ಸಂದರ್ಭ ಮತ್ತೆ ಆಕ್ರೋಶಗೊಂಡ ಗ್ರಾಮಸ್ಥರು, ಅರಣ್ಯ ಇಲಾಖೆಯಿಂದ ಕಿರುಕುಳ ಮುಂದುವರೆದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಗ್ರಾಮೀಣ ಭಾಗದ ಕೃಷಿಕರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದರು.
ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲೇ ಸಿ. ಮತ್ತು ಡಿ. ಜಾಗ ಒತ್ತುವರಿಯಾಗಿದೆ. ಇದನ್ನು ಮೊದಲು ತೆರವುಗೊಳಿಸಿ; ಅದು ಬಿಟ್ಟು ಗ್ರಾಮೀಣ ಪ್ರದೇಶದ ಬಡ ರೈತರ ಮೇಲೆ ದರ್ಪ ತೋರಿಸಬೇಡಿ. ಇಂತಹ ಕಿರುಕುಳ ಮುಂದುವರೆದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಂತರ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೊಂದಿಗೆ ಚರ್ಚಿಸಿದ ಗ್ರಾಮಸ್ಥರು, ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಸದ್ಯದಲ್ಲಿಯೇ ಸಭೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ತ್ರಿಶೂಲ್, ಕಾರ್ಯದರ್ಶಿ ಆದಿತ್ಯ, ಪ್ರಮುಖರಾದ ಡಾಲಿ ಪ್ರಕಾಶ್, ಶರಣ್ ಗೌಡ, ಕಾರ್ಯಪ್ಪ, ಕಾರ್ತಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.