ಶನಿವಾರಸಂತೆ, ನ. ೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಾಹ, ಕಾಜೂರು, ಕೂಜಗೇರಿ, ಮಾದ್ರೆ, ಅಪ್ಪಶೆಟ್ಟಳ್ಳಿ, ಜಾಬೇ ಕೋಡಿ, ಚಿಕ್ಕಕೊಳತ್ತೂರು ಮತ್ತಿತರ ಗ್ರಾಮಗಳ ತೋಟ, ಗದ್ದೆಗಳಲ್ಲಿ ಕೆಲ ದಿನಗಳಿಂದ ೪ ಕಾಡಾನೆಗಳು ಸಂಚರಿಸು ತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ನೆರೆಯ ಗಡಿಭಾಗ ಯಸಳೂರು, ಆಲೂರು, ದೊಡ್ಡಬೆಟ್ಟ ಮೀಸಲು ಅರಣ್ಯ ದಿಂದ ಕಾಡಾನೆಗಳು ಆಹಾರ, ನೀರು ಅರಸಿ ಶನಿವಾರಸಂತೆ ಮೀಸಲು ಅರಣ್ಯಕ್ಕೆ ಬಂದು ಗದ್ದೆ, ತೋಟಗಳಿಗೆ ಲಗ್ಗೆ ಇಡುತ್ತಿವೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಅಟ್ಟುತ್ತಿದ್ದರೂ ಮತ್ತದೇ ದಾರಿಯಲ್ಲಿ ರಾತ್ರಿ ವೇಳೆ ಬರುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿ ಬಾಳೆ, ಪಪ್ಪಾಯಿ ಹಾಗೂ ಗದ್ದೆಗಳಲ್ಲಿ ಭತ್ತದ ಬೆಳೆಯನ್ನು ಎಳೆದು ತಿಂದು ತುಳಿದು ಹೋಗುತ್ತಿವೆ.