ಗುಜರಾತ್ ವಿಧಾನಸಭಾ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು, ನ. ೮: ಗುಜರಾತ್ ವಿಧಾನಸಭಾ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತಗಳಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ ೮ ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಮಾತನಾಡಿದ್ದೇನೆ. ವರಿಷ್ಠರು ಗುಜರಾತ್ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆ ಕುರಿತ ಚರ್ಚೆಗೆ ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಉತ್ತರಿಸಿದರು. ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆಗಾಗಿ ಶೀಘ್ರದಲ್ಲಿಯೇ ನವದೆಹಲಿಗೆ ತೆರಳುವುದಾಗಿ ಸಿಎಂ ಇತ್ತೀಚೆಗೆ ಹೇಳಿದ್ದರು.
ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ವಿಧಿವಶ
ಬೆಂಗಳೂರು, ನ. ೮: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್. ಲೋಹಿತಾಶ್ವ ಅವರು ಮಂಗಳವಾರ ನಿಧನರಾಗಿದ್ದಾರೆ. ೮೦ ವರ್ಷದ ಲೋಹಿತಾಶ್ವ ಅವರಿಗೆ ಇತ್ತೀಚೆಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ. ಲೋಹಿತಾಶ್ವ ಅವರು ಚಿತ್ರ ನಟ, ನಾಟಕಕಾರ ಮತ್ತು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ಅವರು ೫೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ರಂಗ ನಾಟಕಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಲೋಹಿತಾಶ್ವ ಅವರಿಗೆ ಮೂವರು ಮಕ್ಕಳು, ಅವರಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತಮ ಖಳನಟನಾಗಿ ಗುರುತಿಸಿಕೊಂಡಿರುವ ಶರತ್ ಲೋಹಿತಾಶ್ವ ಕೂಡ ಒಬ್ಬರು.
ಶಿಕ್ಷಣ ಲಾಭ ಗಳಿಸುವ ವ್ಯವಹಾರವಲ್ಲ : ಸುಪ್ರೀಂ
ನವದೆಹಲಿ, ನ. ೮: ಖಾಸಗಿ, ಅನುದಾನರಹಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್ಗಳ ವಾರ್ಷಿಕ ಬೋಧನಾ ಶುಲ್ಕವನ್ನು ೨೪ ಲಕ್ಷ ರೂಪಾಯಿಗೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಶುಲ್ಕ ಹೆಚ್ಚಳವು ಅಸಮಂಜಸವಾಗಿದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎಂ.ಎA. ಸುಂದ್ರೇಶ್ ಅವರಿದ್ದ ಪೀಠವು ಈ ಹಿಂದೆ ನಿಗದಿಪಡಿಸಿದ ಶುಲ್ಕದ ಏಳು ಪಟ್ಟು ಅಂದರೆ ೨೪ ಲಕ್ಷ ರೂಪಾಯಿಗೆ ಹೆಚ್ಚಿಸಿರುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ ಎಂದು ಹೇಳಿದೆ. ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ ಎಂದು ರಾಜ್ಯ ಸರ್ಕಾರ ಮತ್ತು ಅರ್ಜಿದಾರ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ. ಬೋಧನಾ ಶುಲ್ಕಗಳು ಯಾವಾಗಲೂ ಕೈಗೆಟುಕುವಂತಿರಬೇಕು, ಇದನ್ನು ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ಭರಿಸುವಂತಿರಬೇಕು. ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನಾ ಸಮಿತಿ ವೈದ್ಯಕೀಯ ಕಾಲೇಜುಗಳ ಮೇಲೆ ೨.೫ ಲಕ್ಷ ವೆಚ್ಚವನ್ನು ವಿಧಿಸಿತು. ಖಾಸಗಿ ಅನುದಾನರಹಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್ಗಳ ವಾರ್ಷಿಕ ಬೋಧನಾ ಶುಲ್ಕವನ್ನು ೨೪ ಲಕ್ಷ ರೂ.ಗೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಗುಜರಾತ್ ಕಾಂಗ್ರೆಸ್ ನಾಯಕ ಮೋಹನ್ ರಾಟ್ವ ಬಿಜೆಪಿ ಸೇರ್ಪಡೆ
ಅಹಮದಾಬಾದ್, ನ. ೮: ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷ ಕಾಂಗ್ರೆಸ್‌ಗೆ ತೀವ್ರ ಆಘಾತ ನೀಡಿದ ಹಿರಿಯ ಶಾಸಕ ಮೋಹನ್ ಸಿನ್ಹಾ ರಾಟ್ವ ಅವರು ಮಂಗಳವಾರ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಸೇರ್ಪಡೆಯಾಗಿದ್ದಾರೆ. ೭೮ ವರ್ಷದ ರಾಟ್ವ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ಅವರಿಗೆ ಕಳುಹಿಸಿದ್ದಾರೆ. ಪ್ರಮುಖ ಬುಡಕಟ್ಟು ನಾಯಕ, ರಾಟ್ವ ಅವರು ಕಾಂಗ್ರೆಸ್‌ನಿAದ ಹತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಮಧ್ಯ ಗುಜರಾತ್‌ನ ಛೋಟಾ ಉದಯಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ೨೦೧೨ಕ್ಕೂ ಮೊದಲು ರಾಟ್ವ ಅವರು ಛೋಟಾ ಉದೇಪುರ್ ಜಿಲ್ಲೆಯ ಪಾವಿ-ಜೆಟ್ಪುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇತ್ತೀಚೆಗಷ್ಟೇ, ಮುಂದಿನ ತಿಂಗಳ ವಿಧಾನಸಭಾ ಚುನಾವಣೆಗೆ ತಾನು ಟಿಕೆಟ್ ಬಯಸುವುದಿಲ್ಲ ಎಂದು ರಾಟ್ವ ಘೋಷಿಸಿದ್ದರು. ಹೀಗಾಗಿ ಕಾಂಗ್ರೆಸ್ ಅವರ ಸ್ಥಾನದಿಂದ ಅವರ ಮಗ ರಾಜೇಂದ್ರ ಸಿನ್ಹಾ ರಾಟ್ವ ಅವರನ್ನು ಕಣಕ್ಕಿಳಿಸಲು ಬಯಸಿತ್ತು. ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ನರನ್ ರಾಟ್ವ ಅವರು ಸಹ ಇದೇ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಗುಜರಾತ್ ವಿಧಾನಸಭೆಗೆ ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ ೮ ರಂದು ಫಲಿತಾಂಶ ಪ್ರಕಟವಾಗಲಿದೆ.
ಭಾರತೀಯ ಕಾನೂನು ಆಯೋಗದ ಅಧ್ಯಕ್ಷರಾಗಿ ಅವಸ್ತಿ ನೇಮಕ
ನವದೆಹಲಿ, ನ. ೮: ಕರ್ನಾಟಕ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನು ಭಾರತೀಯ ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ. ನ್ಯಾಯಮೂರ್ತಿ ಕೆ.ಟಿ. ಶಂಕರನ್, ಪ್ರೊಫೆಸರ್ ಆನಂದ್ ಪಲಿವಾಲ್, ಪ್ರೊಫೆಸರ್ ಡಿಪಿ ವರ್ಮಾ, ಪ್ರೊಫೆಸರ್ ರಕ ಆರ್ಯ ಮತ್ತು ಎಂ. ಕರುಣಾನಿಧಿ ಅವರನ್ನು ಕಾನೂನು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಸುಮಾರು ನಾಲ್ಕು ವರ್ಷಗಳ ನಂತರ ಮತ್ತೆ ಕಾನೂನು ಆಯೋಗ ರಚಿಸಿದ್ದು, ಭಾರತೀಯ ಕಾನೂನು ಆಯೋಗದ ಅಧ್ಯಕ್ಷರಾಗಿ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ರಿತುರಾಜ್ ಅವಸ್ತಿ ಅವರು ಕಳೆದ ಜುಲೈ ೨ ರಂದು ನಿವೃತ್ತರಾಗಿದ್ದರು.
ಇಮ್ರಾನ್ ಖಾನ್ ಹತ್ಯೆ ಯತ್ನ: ಎಫ್‌ಐಆರ್ ದಾಖಲು
ಲಾಹೋರ್, ನ. ೮: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಹತ್ಯೆ ಯತ್ನ ಪ್ರಕರಣ ಸಂಬAಧ ಪಂಜಾಬ್ ಪ್ರಾಂತ್ಯದ ಪೊಲೀಸರು ಇಂದು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆ ನಡೆದ ಕೆಲ ದಿನಗಳ ನಂತರ ಪ್ರಕರಣ ದಾಖಲಿಸಿರುವ ಪೊಲೀಸರು ವಶಕ್ಕೆ ಪಡೆದಿರುವ ದಾಳಿಕೋರನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ. ಇಮ್ರಾನ್ ಖಾನ್ ಮೇಲಿನ ಹತ್ಯೆ ಪ್ರಯತ್ನದ ಸಂಬAಧ ೨೪ ಗಂಟೆಗಳ ಒಳಗೆ ಎಫ್‌ಐಆರ್ ದಾಖಲಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ಆದೇಶ ನೀಡಿದ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ತನ್ನ ಹತ್ಯೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಪಾಕಿಸ್ತಾನದ ಸೇನೆಯ ಹಿರಿಯ ಅಧಿಕಾರಿ ಮೇಜರ್ ಜನರಲ್ ಫೈಸಲ್ ನಸೀರ್ ಅವರ ಹೆಸರನ್ನು ಹೇಳಿದ್ದರು. ಎಫ್‌ಐಆರ್‌ನಲ್ಲಿ ಈ ಮೂವರು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿಲ್ಲ. ನಾವು ಸುಪ್ರೀಂ ಕೋರ್ಟ್ನಲ್ಲಿ ಎಫ್‌ಐಆರ್ ಅನ್ನು ಪ್ರಶ್ನಿಸಲಿದ್ದೇವೆ ಎಂದು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ನಾಯಕ ಫವಾದ್ ಚೌಧರಿ ಹೇಳಿದ್ದಾರೆ. ತಾ. ೩ ರಂದು ತೆಹ್ರೀಕ್ ಇ ಪಾಕಿಸ್ತಾನ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ವಜೀರಾಬಾದ್‌ನ ಅಲ್ಲಾ ಹೋ ಚೌಕ್ ಬಳಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಕಂಟೈನರ್ ಮೇಲೆ ನವೀದ್ ಗುಂಡು ಹಾರಿಸಿದ್ದನು. ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಬಲಗಾಲಿಗೆ ಗುಂಡು ತಗುಲಿದ್ದು, ಶಸ್ತçಚಿಕಿತ್ಸೆಗೆ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ.