ಶ್ರೀಮಂಗಲ, ನ. ೬: ೨೦೨೨ರಲ್ಲಿ ಆರಂಭವಾದ ಕೊಡವ ಹಗ್ಗಜಗ್ಗಾಟ ಪಂದ್ಯಾಟವನ್ನು ೨೦೨೩ನೇ ಮಾರ್ಚ್ ೩೧, ಏಪ್ರಿಲ್ ೧ ಹಾಗೂ ೨ ರಂದು ಚೆಟ್ಟಂಗಡ ಕುಟುಂಬವು ಟಿ. ಶೆಟ್ಟಿಗೇರಿಯಲ್ಲಿ ನಡೆಸಲಿದೆ.
ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಚೆಟ್ಟಂಗಡ ಕುಟುಂಬದ ಐನ್ ಮನೆಯಲ್ಲಿ ಈ ಸಂಬAಧ ನಡೆದ ಪ್ರಥಮ ಸಭೆಯಲ್ಲಿ ದಿನಾಂಕ ನಿಗದಿಗೊಳಿಸಲಾಯಿತು. ಕೊಡವ ಕುಟುಂಬದ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದ ಈ ಪಂದ್ಯಾವಳಿಯಲ್ಲಿ ೩೦೦ಕ್ಕೂ ಹೆಚ್ಚು ಕೊಡವ ಕುಟುಂಬದ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪುರುಷರ ಹಾಗೂ ಮಹಿಳೆಯರ ವಿಭಾಗದ ವಿಜೇತ ತಂಡಗಳಿಗೆ ಪ್ರಥಮ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ ನೀಡುವಂತೆ ತೀರ್ಮಾನಿಸಲಾಯಿತು.
ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ, ಚೆಟ್ಟಂಗಡ ಕಪ್ - ೨೦೨೩ನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಇಂದು ನಡೆದ ಸಭೆಯಲ್ಲಿ ಕ್ರೀಡಾಕೂಟಕ್ಕೆ ಕುಟುಂಬದ ೪೦ ಸದಸ್ಯರ ಸಮಿತಿ ರಚಿಸಲಾಯಿತು. ೨೦೨೨ ಏಪ್ರಿಲ್ ೨೩ ರಂದು ಪ್ರಥಮವಾಗಿ ಕಕ್ಕಬೆ ಶಾಲಾ ಮೈದಾನದಲ್ಲಿ ಪೊನ್ನೋಲತಂಡ ಕುಟುಂಬಸ್ಥರಿAದ ಚೆಟ್ಟಂಗಡ ಕುಟುಂಬವು ಕ್ರೀಡಾಕೂಟದ ಬಾವುಟ ಪಡೆದಿತ್ತು. ಈ ಬಾರಿ ಅತ್ಯುತ್ತಮ ರೀತಿಯಲ್ಲಿ ಪಂದ್ಯಾಟ ಆಯೋಜಿಸಲು ಕುಟುಂಬದ ಸದಸ್ಯರೆಲ್ಲರೂ ಕೈಜೋಡಿಸುವಂತೆಯೂ ಅತೀ ಹೆಚ್ಚು ಕೊಡವ ಕುಟುಂಬವು ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಮಾಡಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.