ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಮೈದಾನಕ್ಕೆ ಆಗಮಿಸಿ ಪಂದ್ಯಾಟವನ್ನು ಕಣ್ತುಂಬಿಕೊAಡರು. ಕೊಡವ ಕುಟುಂಬಗಳ ನಡುವೆ ಪ್ರಾಕೃತಿಕ ವಿಕೋಪ, ಕೊರೊನಾ ಪರಿಸ್ಥಿತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಹಾಕಿ ಪಂದ್ಯಾಟ ನಡೆಯದೆ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ, ಈ ಬಾರಿ ಕೊಡವ ಹಾಕಿ ಅಕಾಡೆಮಿ ವಿನೂತನ ಮಾದರಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಕ್ರೀಡಾಪ್ರೇಮಿಗಳು ಸವಿದರು. ಆಟಗಾರರನ್ನು ಪ್ರೋತ್ಸಾಹಿಸುತ್ತ, ಕುಣಿದು ಕುಪ್ಪಳಿಸುತ್ತ ತಾವು ಸಂಭ್ರಮಿಸಿದರು. ಮೈದಾನ ಸುತ್ತಲೂ ಕ್ರೀಡಾಸಕ್ತರು ನೆರೆದಿದ್ದರು.
ಮೋಡದ ವಾತವರಣವಿದ್ದರೂ ಕ್ರೀಡಾಪಟುಗಳು ಟರ್ಫ್ ಮೈದಾನದಲ್ಲಿ ಬೆವರು ಸುರಿಸಿದರು. ಗೆದ್ದೆ ತೀರುವ ನಿಟ್ಟಿನಲ್ಲಿ ಎರಡು ತಂಡಗಳು ತೀವ್ರ ಸೆಣಸಾಟ ನಡೆಸಿದವು. ಇತ್ತ ಗ್ಯಾಲರಿಯಲ್ಲಿ ಕುಳಿತ ಕ್ರೀಡಾಭಿಮಾನಿಗಳು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುತ್ತಾ ಹಾಕಿ ಹಬ್ಬದ ರಸದೌತಣ ಸವಿದರು.