ಸುಂಟಿಕೊಪ್ಪ, ನ. ೬: ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಮತ್ತು ಬಿಲ್ಲವ ವಿದ್ಯಾರ್ಥಿ ಘಟಕದ ಸಹಭಾಗಿತ್ವದಲ್ಲಿ ನಾರಾಯಣ ಗುರುಗಳ ಜಯಂತೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ. ಬಿಲ್ಲವ ಕ್ರಿಕೆಟ್ ಟೂರ್ನಿಯಲ್ಲಿ ಮಡಿಕೇರಿ ರಾಯಲ್ ಪೂಜಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ಮಕ್ಕಂದೂರು ಟೈಟನ್ಸ್ ಪಡೆದುಕೊಂಡಿತು.

(ಮೊದಲ ಪುಟದಿಂದ)

ದಿನದ ಮೊದಲ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ಸೋಮವಾರಪೇಟೆ ಬಿರ್ವರ ಬ್ರದರ್ಸ್ ತಂಡಗಳ ನಡುವೆ ನಡೆದು ಮೊದಲು ಬ್ಯಾಟ್ ಮಾಡಿದ ಸುಂಟಿಕೊಪ್ಪ ತಂಡವು ನಿಗದಿತ ೪ ಓವರ್‌ಗಳಿಗೆ ೨೭ ರನ್‌ಗಳನ್ನು ಕಲೆಹಾಕಿತ್ತು. ಅದರಂತೆ ಸೋಮವಾರಪೇಟೆ ತಂಡ ಕೇವಲ ೩.೪ ಓವರುಗಳಿಗೆ ೨೮ ರನ್ ಹೊಡೆಯುವುದರ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಸುಂಟಿಕೊಪ್ಪದ ‘ಬಿಲ್ಲವ ಸ್ಕಾರ್ಪಿನ್ಸ್’ ಮತ್ತು ಅಮ್ಮತ್ತಿ ಬಿಲ್ಲವ ಟೈಗರ್ಸ್ ನಡುವೆ ನಡೆದು ಅಮ್ಮತ್ತಿ ತಂಡವು ಜಯಗಳಿಸಿತು. ನಂತರ ನಡೆದ ಮತ್ತೊಂದು ಪಂದ್ಯವು ಬಿಲ್ಲವ ಪ್ವಾಂಥರ್ಸ್ ಸುಂಟಿಕೊಪ್ಪ ಮತ್ತು ಚಂದನ್ ಬ್ರದರ್ಸ್ ಅಮ್ಮತ್ತಿ ತಂಡಗಳ ನಡುವೆ ನಡೆದು ಅಮ್ಮತ್ತಿ ತಂಡ ಜಯಗಳಿಸಿತು.

ಮೊದಲ ಸೆಮಿ ಫೈನಲ್ ಪಂದ್ಯವು ರಾಯಲ್ ಪೂಜಾರಿ ಮಡಿಕೇರಿ ಮತ್ತು ಚಂದನ್ ಬ್ರದರ್ಸ್ ಅಮ್ಮತ್ತಿ ನಡುವೆ ನಡೆದು ಮೊದಲು ಬ್ಯಾಟ್ ಮಾಡಿದ ಮಡಿಕೇರಿ ತಂಡ ನಿಗದಿತ ೫ ಓವರುಗಳಿಗೆ ೫ ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿತು. ಆದರೆ ಅಮ್ಮತ್ತಿ ತಂಡವು ೫ ಓವರುಗಳಿಗೆ ೨೮ ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ರಾಯಲ್ ಚಾಲೆಂಜರ್ಸ್ ತಂಡ ಪೈನಲ್‌ಗೆ ಲಗ್ಗೆ ಇಟ್ಟಿತ್ತು.

ಎರಡನೇ ಸೆಮಿಫೈನಲ್ ಪಂದ್ಯವು ಟೈಟನ್ಸ್ ಮಕ್ಕಂದೂರು ಮತ್ತು ಬಿಲ್ಲವ ಟೈಗರ್ಸ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು.

ಮೊದಲು ಬ್ಯಾಟ್ ಮಾಡಿದ ಮಕ್ಕಂದೂರು ತಂಡವು ನಿಗದಿತ ೫ ಓವರ್‌ಗಳಿಗೆ ೫ ವಿಕೆಟ್ ನಷ್ಟಕ್ಕೆ ೫೭ ರನ್‌ಗಳಿಸಿತು. ೫೮ ರನ್‌ಗಳ ಬೆನ್ನಟ್ಟಿದ್ದ ಅಮ್ಮತ್ತಿ ತಂಡವು ೪ ವಿಕೆಟ್ ನಷ್ಟಕ್ಕೆ ೪೪ ರನ್‌ಗಳಿಸಿ ಸೋತು ಮಕ್ಕಂದೂರು ತಂಡ ಫೈನಲ್ ಪ್ರವೇಶಿಸಿತು.

ಸಂಜೆ ನಡೆದ ಫೈನಲ್ ಪಂದ್ಯವು ರಾಯಲ್ ಪೂಜಾರಿ ಮಡಿಕೇರಿ ಮತ್ತು ಟೈಟನ್ಸ್ ಮಕ್ಕಂದೂರು ತಂಡಗಳ ನಡುವೆ ನಡೆಯಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಡಿಕೇರಿ ರಾಯಲ್ ಪೂಜಾರಿ ತಂಡವು ನಿಗದಿತ ೬ ಓವರುಗಳಿಗೆ ೪ ವಿಕೆಟ್ ನಷ್ಟಕ್ಕೆ ೬೯ ರನ್ ಹೊಡೆದು ಮಕ್ಕಂದೂರು ಟೈಟನ್ಸ್ ತಂಡಕ್ಕೆ ೭೦ರ ಗುರಿ ನೀಡಿತು.

೭೦ ರನ್‌ಗಳ ಗುರಿ ಬೆನ್ನತ್ತಿದ್ದ ಮಕ್ಕಂದೂರು ಟೈಟನ್ಸ್ ತಂಡ ನಿಗದಿತ ೬ ಓವರುಗಳಿಗೆ ೪ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿ ಸೋಲನ್ನು ಒಪ್ಪಿಕೊಳ್ಳುವುದರ ಮೂಲಕ ಮಡಿಕೇರಿ ರಾಯಲ್ ಪೂಜಾರಿ ತಂಡವು ಜಯದ ನಗುವನ್ನು ಬೀರಿ ಬಿಲ್ಲವ ಟ್ರೋಫಿಗೆ ಬಾಜನವಾಗಿ ಮಕ್ಕಂದೂರು ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಹಿರಿಯ ಸದಸ್ಯೆ ಜಯಂತಿ ಕೃಷ್ಣಪ್ಪ, ಬಿಲ್ಲವ ಸಂಘದ ಗೌರವಾಧ್ಯಕ್ಷ ಬಿ.ಕೆ.ಮೋಹನ್, ಸಂಘದ ಅಧ್ಯಕ್ಷ ಮಣಿ, ಸಂಘದ ಕಾರ್ಯದರ್ಶಿ ವೆಂಕಪ್ಪ ಕೋಟ್ಯನ್, ಸದಸ್ಯರಾದ ನಾಗೇಶ್ ಪೂಜಾರಿ, ಬಾಲಕೃಷ್ಣ, ದೇವಪ್ಪ, ದಿನೇಶ್ ತೊಂಡೂರು, ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಂ, ಕಾರ್ಯದರ್ಶಿ ಯಶ್ವಿತ್ ಪೂಜಾರಿ, ಹರ್ಷಿತ್ ಪೂಜಾರಿ, ಗಗನ್ ಪೂಜಾರಿ, ಜೀವನ್ ಪೂಜಾರಿ ಸೇರಿದಂತೆ ಇತರರು ಭಾಗವಹಿಸಿದ್ದರು.