ಮಡಿಕೇರಿ, ನ. ೫: ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರ ಹೆಸರನ್ನು ಬೀಡಾಡಿ ಹಸುವಿನ ಮೇಲೆ ಬರೆದು ಅವಮಾನ ಮಾಡಿರುವ ವ್ಯಕ್ತಿ ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟಿರುವವರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅವರು, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ತಮ್ಮ ಪಾಲಿನ ಕೆಲಸವನ್ನು ನಗರಸಭಾ ಅಧ್ಯಕ್ಷೆ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇವರ ಜನಪರ ಕೆಲಸದಿಂದ ಅಸೂಯೆಗೊಂಡ ಗುಂಪೊAದು ಇವರ ಹೆಸರನ್ನು ಕೆಡಿಸುವ ಉದ್ದೇಶದಿಂದ ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದು, ಇದು ಖಂಡನೀಯ ಎಂದಿದ್ದಾರೆ.

ಮಳೆಯ ಕಾರಣದಿಂದ ರಸ್ತೆ ಕಾಮಗಾರಿಗಳು ಸೇರಿದಂತೆ ಅನೇಕ ಕಾಮಗಾರಿಗಳು ಸ್ವಲ್ಪ ತಡವಾಗಿದ್ದು, ಮುಂದಿನ ತಿಂಗಳಿನಿAದ ಈಗಾಗಲೇ ಬಿಡುಗಡೆ ಆಗಿರುವ ನಾಲ್ಕನೇ ಹಂತದ ರೂ. ೪೦ ಕೋಟಿ ಹಣದಿಂದ ಟೆಂಡರ್ ಹಂತದಲ್ಲಿರುವ ಅನೇಕ ಅಭಿವೃದ್ಧಿ ಕೆಲಸಗಳು ಪ್ರತಿ ವಾರ್ಡ್ನಲ್ಲೂ ನಡೆಯಲಿವೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ವಾರ್ಡ್ನಲ್ಲೂ ಕೂಡ ನಗರಸಭಾ ನಿಧಿ ಸೇರಿದಂತೆ ಸರ್ಕಾರದ ವಿವಿಧ ಅನುದಾನಗಳನ್ನು ಬಳಸಿಕೊಂಡು ವಿವಿಧ ಅಭಿವೃದ್ಧಿ ಕೆಲಸಗಳಿಗೆ ನಗರಸಭೆಯ ಆಡಳಿತ ಮಂಡಳಿ ಮುಂದಾಗಿದ್ದು ಅನವಶ್ಯಕವಾಗಿ ನಗರಸಭೆಯ ಹೆಸರನ್ನು ಹಾಳುಮಾಡಲು ಕೆಲ ದುಷ್ಟಶಕ್ತಿಗಳ ಪ್ರಯತ್ನ ಫಲ ಕೊಡುವುದಿಲ್ಲ. ತಪ್ಪಿತಸ್ಥರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಹೇಶ್ ಜೈನಿ ಒತ್ತಾಯಿಸಿದ್ದಾರೆ.

ಕೊಡವಾಮೆರ ಕೊಂಡಾಟ ಖಂಡನೆ

ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅವರ ಹೆಸರನ್ನು ಬೀಡಾಡಿ ದನವೊಂದರ ಮೇಲೆ ಬರೆದು ಅವಮಾನ ಮಾಡಿರುವುದನ್ನು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ ಪೊಲೀಸ್ ಇಲಾಖೆ ತಕ್ಷಣ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದೆ.