ಕೂಡಿಗೆ, ನ. ೫: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಬರುವ ೬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭೆ ಕುಶಾಲನಗರ ಪೊಲೀಸ್ ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದಲ್ಲಿ ಜರುಗಿತು.

ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ದೇವಾಲಯ ಸಮಿತಿಯವರು ಮುಂಜಾಗ್ರತವಾಗಿ ಕೈಗೊಳ್ಳಬಹುದಾದ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಮಿತಿಯವರು ದೇವಾಲಯದ ಆವರಣದಲ್ಲಿ ಸಿಸಿ ಟಿವಿ ಅಳವಡಿಕೆ, ಭದ್ರತ ಸಿಬ್ಬಂದಿ ನೇಮಕ ಮತ್ತು ಹುಂಡಿಯ ಹಣ ಮತ್ತು ದೇವರಿಗೆ ಧರಿಸುವ ಚಿನ್ನಭರಣವನ್ನು ತೆಗೆದು ಬ್ಯಾಂಕ್ ಲಾಕರ್ ಇಟ್ಟು ಹಬ್ಬ ಹರಿದಿನಗಳಲ್ಲಿ ತೊಡಿಸಿ ನಂತರ ತೆಗೆದು ಇಡುವ ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಡಿವೈಎಸ್‌ಪಿ ನೀಡಿದರು.

ಈ ಸಂದರ್ಭ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಮಾತನಾಡಿದರು. ಈ ಸಂದರ್ಭ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ ಸೇರಿದಂತೆ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಗುಡ್ಡೆಹೊಸೂರು, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ಉಪ ಗ್ರಾಮಗಳ ದೇವಾಲಯ ಸಮಿತಿಯ ಸದಸ್ಯರು ಹಾಜರಿದ್ದರು.