*ಗೋಣಿಕೊಪ್ಪ, ನ. ೫: ಕುಟ್ಟ ಭಾಗದಲ್ಲಿ ಕಾಡಾನೆಗಳ ನಿಯಂತ್ರಣ ಮಾಡದಿದ್ದಲ್ಲಿ ನಿರಂತರ ಹೋರಾಟಕ್ಕೆ ಮುಂದಾಗುವುದಾಗಿ ಸಾಮೂಹಿಕ ರೈತ ಸಂಘದ ನಂಜುAಡಸ್ವಾಮಿ ಬಣದ ಕುಟ್ಟ -ಕೆ. ಬಾಡಗ ವಲಯ ಸಮಿತಿ ಮುಖಂಡ ಕಳ್ಳಿಚಂಡ ಕೆ. ನಟರಾಜ್ ಎಚ್ಚರಿಸಿದ್ದಾರೆ.

ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮಕ್ಕೆ ಮುಂದಾಗುತ್ತಿಲ್ಲ. ಭರವಸೆ, ಬೇಡದ ಯೋಜನೆಗಳನ್ನು ಅನುಷ್ಠಾನಗೊಳಿಸಿಕೊಂಡು ರೈತವರ್ಗ ನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಶೀಘ್ರದಲ್ಲಿ ಆನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಅಥವಾ ಸಂತಾನ ಹರಣದ ಮೂಲಕ ಪರಿಹಾರ ಹಮ್ಮಿಕೊಳ್ಳಬೇಕು. ಸೂಕ್ತ ಸ್ಪಂದನೆÀ ನೀಡದಿದ್ದರೆ ನಿರಂತರ ಹೋರಾಟ ಮೂಲಕ ಸರ್ಕಾರನ್ನು ಎಚ್ಚರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಡಾನೆ, ಕಾಡುಕೋಣ, ಕಾಡು ಹಂದಿ, ಕಾಡು ಅಳಿಲು ವನ್ಯಪ್ರಾಣಿಗಳಿಂದ ಬೆಳೆ ಕೈ ಸೇರುತ್ತಿಲ್ಲ. ತಿಂದು, ತುಳಿದು ನಾಶ ಮಾಡುವು ದರಿಂದ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರೂ, ಸೂಕ್ತ ಸ್ಪಂದನೆ ದೊರೆತಿಲ್ಲ. ಹಗಲು ಕೂಡ ದಾಳಿ ಮಾಡುವುದರಿಂದ ಜನರು ಮನೆ ಬಿಟ್ಟು ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಆನೆ ಕಂದಕ ೧೦ ವರ್ಷಗಳಿಂದ ಹೂಳು ತೆಗೆಯದೆ ಆನೆಗಳ ಓಡಾಟಕ್ಕೆ ನೆರವಾಗುತ್ತಿದೆ. ಬೇಡದ ಯೋಜನೆ ಕೈಬಿಟ್ಟು ಆನೆ ಕಂದಕದ ಹೂಳು ತೆಗೆದು ರೈತರ ರಕ್ಷಣೆಗೆ ಮುಂದಾಗಬೇಕು. ಆನೆಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನಹರಣ ಅಥವಾ ಬೇರೆಡೆಗೆ ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಆನೆ ಕಂದಕ, ಸೋಲಾರ್, ರೈಲ್ವೆ ಬ್ಯಾರಿಕೇಡ್, ರೋಪ್ ವೇ ಯೋಜನೆಗಳನ್ನು ಜಾರಿಗೆ ತಂದಿರುವ ಅರಣ್ಯ ಇಲಾಖೆ ಎಲ್ಲವನ್ನೂ ಅರ್ಧದಲ್ಲಿ ಕೈಬಿಡುತ್ತಿದೆ. ಅರಣ್ಯ ಅಂಚಿನ ಸಂಪೂರ್ಣ ಭಾಗದಲ್ಲಿ ಆನೆ ಕಂದಕ ತೋಡಬೇಕು. ಇದರಿಂದ ನಿಯಂತ್ರಣ ಸಾಧ್ಯ. ಮಧ್ಯೆ ಮಧ್ಯೆ ಬಿಟ್ಟು ತೋಡುವುದರಿಂದ ಆನೆಗಳು ಗ್ರಾಮಕ್ಕೆ ನುಸುಳಲು ಸುಲಭವಾಗುತ್ತಿದೆ ಎಂದರು.

ಸAಚಾಲಕ ನವೀನ್ ಅಯ್ಯಪ್ಪ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಯಾಗಿದ್ದರೂ, ಜನರಿಗೆ ಪ್ರಯೋಜನವಾಗುತ್ತಿಲ್ಲ. ಎಲ್ಲ ಸರ್ಕಾರಿ ಕೆಲಸಕ್ಕೆ ಮತ್ತೆ ವೀರಾಜಪೇಟೆಗೆ ತೆರಳಬೇಕಾದ ಅನಿವಾರ್ಯತೆ. ಕುಟ್ಟ-ಬಿರುನಾಣಿ ಭಾಗದ ಜನರು ದೂರದಿಂದ ಬಂದು ಮತ್ತೆ ಕಂದಾಯ, ಸರ್ವೆ ಇಲಾಖೆಗೆ ವೀರಾಜಪೇಟೆಗೆ ತೆರಳಬೇಕು. ಪೊನ್ನಂಪೇಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ತಾಲೂಕು ರಚನೆ ಮಾಡಿ ಪ್ರಯೋಜನವಾಗುತ್ತಿಲ್ಲ ಎಂದರು. ಗೋಷ್ಠಿಯಲ್ಲಿ ಮುಖಂಡ ಹೊಟ್ಟೇಂಗಡ ಎಸ್. ತಿಮ್ಮಯ್ಯ ಇದ್ದರು.