ಕಣಿವೆ, ನ. ೩: ಅಕಾಲಿಕವಾಗಿ ಮಳೆಯಾಗುತ್ತಿರುವ ಈ ಸಂದರ್ಭ ಈಗಾಗಲೇ ಭತ್ತದ ಕೃಷಿ ಕೈಗೊಂಡಿರುವ ಕೃಷಿಕರಿಗೆ ಹೆಚ್ಚಾಗಿ ಹಾನಿಯಾಗುವ ಭೀತಿ ಆವರಿಸಿದೆ.
ಹಾರಂಗಿ ಜಲಾನಯನ ವ್ಯಾಪ್ತಿಯ ಬಹುತೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಗರ್ಭಾವಸ್ಥೆಯಲ್ಲಿರುವ ಭತ್ತದ ಫಸಲಿನ ಮೇಲೆ ಒಂದು ವೇಳೆ ಮಳೆ ಸುರಿದರೆ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಈಗಾಗಲೇ ರಾಜಮುಡಿ ಹಾಗೂ ರಾಜಭೋಗ ತಳಿ ಹೊರತುಪಡಿಸಿ ಉಳಿದೆಲ್ಲ ತಳಿಯ ಭತ್ತದ ಕಾಳುಕಟ್ಟುವ ಹಂತಕ್ಕೆ ಕೆಲವೊಂದು ಕಡೆ ತಲುಪಿದರೆ ಬಹಳಷ್ಟು ಕಡೆ ಈ ಹಂತವನ್ನು ದಾಟುತ್ತಿದೆ. ಇದರಿಂದಾಗಿ ಭತ್ತದ ಇಳುವರಿಯ ಮೇಲೆ ಪರಿಣಾಮ ಉಂಟಾಗುತ್ತದೆ.
ಬಹುತೇಕ ರೈತರು ಹೆಚ್ಚಾಗಿ ಕೈಗೊಳ್ಳುವ ರಾಜ ಮುಡಿ ಹಾಗೂ ರಾಜಭೋಗ ಫಸಲು ಇನ್ನೇನು ಹತ್ತರಿಂದ ಹದಿನೈದು ದಿನಗಳಲ್ಲಿ ಕಾಳು ಕಟ್ಟಲಿದೆ. ಈ ಅಕಾಲಿಕ ಮಳೆ ಈ ಸಂದರ್ಭ ಒಂದಷ್ಟು ದಿನಗಳ ಅವಧಿ ಸುರಿಯದಿದ್ದರೆ ಒಳಿತು ಎನ್ನುತ್ತಾರೆ ತೊರೆನೂರು ಗ್ರಾಮದ ಪ್ರಗತಿ ಪರ ಕೃಷಿಕ ಟಿ.ಎಲ್. ಶಿವಣ್ಣ ಹಾಗೂ ಚಿಕ್ಕಹೊಸೂರು ಗ್ರಾಮದ ಸದಾಶಿವ.
ಜೋಳದ ಫಸಲಿಗೆ ಹಾನಿ
ಇನ್ನು ಕೆಲವೆಡೆಗಳಲ್ಲಿ ಮುಸುಕಿನ ಜೋಳದ ಕಟಾವು ಕಾರ್ಯ ನಡೆಯುತ್ತಿದ್ದು ಈಗ ಮಳೆ ಸುರಿದರೆ ಅಥವಾ ಮೋಡ ಕವಿದರೂ ಕೂಡ ಅದು ಜೋಳದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಬೆಳೆಗಾರರ ಆತಂಕ. ಈ ಹಿಂದೆ ಮಳೆ ಸಕಾಲಿಕವಾಗಿ ಸುರಿಯದೆ ಬೆಳೆಯ ಮೇಲೆ ಮಾರಕ ಪರಿಣಾಮ ಉಂಟು ಮಾಡಿತ್ತು. ಇದೀಗ ಅಕಾಲಿಕ ಮಳೆ ಬೇರೆಯದೇ ಆದ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.