ಕುಶಾಲನಗರ, ನ. ೩: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನ ರಥೋತ್ಸವ ತಾ.೧೨ ರ ಶನಿವಾರ ಜರುಗಲಿದೆ. ಜಾತ್ರಾ ಅಂಗವಾಗಿ ತಾ.೭ ರಿಂದ ೧೮ ರವರೆಗೆ ವಿವಿಧ ಉತ್ಸವಗಳು ನಡೆಯಲಿವೆ. ನವೆಂಬರ್ ೭ ರಂದು ಕುಶಾಲನಗರ ಅರ್ಚಕರ ಮತ್ತು ಪುರೋಹಿತರ ಸಹಯೋಗದೊಂದಿಗೆ ದೇವಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಲಕ್ಷ ದೂರ್ವಹೋಮ ನಡೆಯಲಿದೆ.

೯ ರಂದು ರಾತ್ರಿ ೮ ಗಂಟೆಗೆ ದೀಪಾರಾಧನೆ, ಕಾರ್ತಿಕ ದಟ್ಟೋತ್ಸವ ಮತ್ತು ಶ್ರೀ ಸತ್ಯ ನಾರಾಯಣ ಪೂಜೆ, ತಾ.೧೦ ರಂದು ಮೂಷಿಕ ವಾಹನ ಉತ್ಸವ, ೧೧ ರಂದು ಚಂದ್ರಬಿAಬೋತ್ಸವ, ೧೨ ರಂದು ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ, ೧೩ ರಂದು ಮಂಟಪೋತ್ಸವ, ೧೪ ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, ೧೫ ರಂದು ಅನ್ದೋಲಿಕೋತ್ಸವ, ೧೬ ರಂದು ತೆಪ್ಪೋತ್ಸವ, ೧೭ ರಂದು ತೀರ್ಥಸ್ನಾನ ಪೂಜಾ ವಿಧಿಗಳು (ಕಾವೇರಿ ನದಿಯಲ್ಲಿ) ಜರುಗಲಿವೆ.

ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ತಾ.೧೨ ರಂದು ಮಧ್ಯಾಹ್ನ ೧೨ ಗಂಟೆಗೆ ಅಭಿಜಿನ್ ಲಗ್ನದಲ್ಲಿ ರಥೋತ್ಸವ ನಡೆಯುವುದು. ಪ್ರತಿ ವರ್ಷದಂತೆ ರಥದ ಮುಂದೆ ಈಡುಗಾಯಿ ಒಡೆಯುವವರು ಹರಕೆ ಈಡೇರಿಕೆಗಾಗಿ ೫ ಕಾಯಿಗಳನ್ನು ಮಾತ್ರ ಒಡೆದು ಉಳಿದ ಕಾಯಿಗಳ ಹಣವನ್ನು ದೇವಾಲಯದ ಅಭಿವೃದ್ಧಿ ನಿಧಿಗೆ ನೀಡುವಂತೆ ಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಕೋರಿದ್ದಾರೆ.

ಅನ್ನಸಂತರ್ಪಣೆಗೆ ಹಣ ನೀಡುವವರು ಅನ್ನಸಂತರ್ಪಣಾ ಸಮಿತಿ ಅಥವಾ ದೇವಾಲಯದ ಕಚೇರಿಯಲ್ಲಿ ನೀಡಿ ರಸೀದಿ ಪಡೆಯುವಂತೆ ಮನವಿ ಮಾಡಿದ್ದಾರೆ. ಜಾತ್ರಾ ಅಂಗವಾಗಿ ಈ ಬಾರಿ ನಡೆಯಬೇಕಾಗಿದ್ದ ಗೋ ಪ್ರದರ್ಶನ ಮತ್ತು ಜಾತ್ರೆ ಜಿಲ್ಲಾಡಳಿತದ ಆದೇಶದಂತೆ ರದ್ದುಗೊಂಡಿದೆ ಎಂದು ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್ ವಸಂತಕುಮಾರ್ ತಿಳಿಸಿದ್ದಾರೆ.

ಪ್ರತಿ ದಿನ ಸಂಜೆ ದೇವಾಲಯದಲ್ಲಿ ಭಜನೆ, ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಜಾತ್ರಾ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳ ಯಶಸ್ವಿಗೆ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲು ಆಡಳಿತ ಮಂಡಳಿ ಪ್ರಮುಖರ ನೇತೃತ್ವದಲ್ಲಿ ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸೇವಾ ಸಮಿತಿಯ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ ನೇತೃತ್ವದಲ್ಲಿ ಉಪಾಧ್ಯಕ್ಷರಾಗಿ ಆರ್.ಬಾಬು, ಕಾರ್ಯದರ್ಶಿಯಾಗಿ ಬಿ.ಕೆ.ಮುತ್ತಣ್ಣ, ಖಜಾಂಚಿಯಾಗಿ ಎಂ.ಕೆ.ದಿನೇಶ್, ನಿರ್ದೇಶಕರುಗಳಾಗಿ ವಿ.ಡಿ. ಪುಂಡರೀಕಾಕ್ಷ, ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜ್, ಎಂ.ವಿ.ನಾರಾಯಣ್ ಸೇವೆ ಸಲ್ಲಿಸುತ್ತಿದ್ದಾರೆ. ಖಾಯಂ ಆಹ್ವಾನಿತರಾಗಿ ಟಿ.ಆರ್.ಶರವಣಕುಮಾರ್, ವಿಶೇಷ ಆಹ್ವಾನಿತರಾಗಿ ಹೆಚ್.ಎನ್.ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುAಡಸ್ವಾಮಿ, ಪ್ರಧಾನ ಅರ್ಚಕರಾಗಿ ಆರ್.ಕೆ.ನಾಗೇಂದ್ರಬಾಬು ಅವರು ಕಾರ್ಯನಿರ್ವಹಿಸುತ್ತಿದ್ದಾರೆ.