ಸೋಮವಾರಪೇಟೆ, ನ. ೪: ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಅವಧಿಯಲ್ಲಿಯೇ ಗುರಿಯನ್ನಿರಿಸಿ ಅದನ್ನು ಸಾಧಿಸುವ ಛಲ ಮೂಡಿಸಬೇಕು. ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಗತಿಗಳಲ್ಲಿಯೇ ತರಬೇತಿ ನೀಡಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ನಾವು ಎಲ್ಲಿಯವರಗೆ ನಮ್ಮ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುತ್ತೇವೆಯೋ ಅಲ್ಲಿಯವರೆಗೆ ಭಾಷೆ ಉಳಿಯುತ್ತದೆ. ಎಲ್ಲ ಶಾಲೆಗಳಲ್ಲೂ ಗುಣಮಟ್ಟದ ಪ್ರಯೋಗ ಶಾಲೆ, ಗ್ರಂಥಾಲಯಗಳನ್ನು ಮಾಡಿದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಡಾ. ಮಂಥರ್ ಗೌಡ ಮಾತನಾಡಿ, ಜಾತಿ, ಮತಗಳಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ಸರ್ಕಾರಗಳ ಕೆಲವು ತಪ್ಪು ನಿರ್ಧಾರಗಳಿಂದ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಪದವಿ ಶಿಕ್ಷಣಕ್ಕೆ ನೀಡುವಂತೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿಲ್ಲ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಾಸಕರ ಅನುದಾನವನ್ನು ಹೆಚ್ಚಾಗಿ ಬಳಸಿ ಖಾಸಗಿ ಶಾಲೆಗಳಂತೆ ಅನುಕೂಲ ಕಲ್ಪಸಬೇಕೆಂದರು.
ಇದೇ ಸಂದರ್ಭ ರಾಜ್ಯ ಮಟ್ಟದ ಉತ್ತಮ ಶಿಕ್ಷಣ ಪ್ರಶಸ್ತಿ ಪಡೆದ ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪದ್ಮಾ ವಹಿಸಿದ್ದರು. ವೇದಿಕೆಯಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿಲೀಪ್, ಪ್ರೌಢಶಾಲಾ ಪೋಷಕರ ಸಮಿತಿ ಅಧ್ಯಕ್ಷ ರಾಜಣ್ಣ, ಪ್ರಾಥಮಿಕ ಶಾಲಾ ಪೋಷಕರ ಸಮಿತಿ ಅಧ್ಯಕ್ಷ ರಮೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣೇಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಸ್ತೆಲೊ, ಪ್ರಮುಖರಾದ ಎಸ್.ಎಂ. ಡಿಸಿಲ್ವ ಮತ್ತಿತರರು ಇದ್ದರು.