ಸೋಮವಾರಪೇಟೆ, ನ. ೨: ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿನಿಯೋರ್ವಳ ಚಿಕಿತ್ಸೆಗೆ ಶಿವಾಜಿ ಯುವ ಸೇನೆಯ ಪದಾಧಿಕಾರಿಗಳು ನೆರವು ಒದಗಿಸಲು ಮುಂದಾಗಿದ್ದು, ಸಂಘಟನೆಯ ಪದಾಧಿಕಾರಿಗಳು ನೀಡಿದ ಹಣದೊಂದಿಗೆ ಸಾರ್ವಜನಿಕರಿಂದಲೂ ದೇಣಿಗೆ ಸಂಗ್ರಹಿಸುವ ಮೂಲಕ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕುಂಬೂರು ಗ್ರಾಮ ನಿವಾಸಿ ನಾಗಂಡ ಸುಧಾ ಅವರ ಪುತ್ರಿಯು ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿದ್ದು, ಸಂಪೂರ್ಣ ಗುಣಮುಖರಾಗಲು ರೂ. ೨೦ ಲಕ್ಷ ವೈದ್ಯಕೀಯ ವೆಚ್ಚ ಬೇಕಾಗುವುದಾಗಿ ವೈದ್ಯರು ತಿಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ಸುಧಾ ಅವರು, ಇದೀಗ ತನ್ನ ಪುತ್ರಿಯ ವೈದ್ಯಕೀಯ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲ. ಇವರ ಮತ್ತೋರ್ವ ಪುತ್ರಿಯೂ ವ್ಯಾಸಂಗ ಮಾಡುತ್ತಿದ್ದು, ಸುಧಾ ಅವರ ಪತಿ ಕಳೆದ ತಿಂಗಳಷ್ಟೇ ನಿಧನರಾಗಿದ್ದಾರೆ.
ಕುಟುಂಬದ ಆಧಾರವನ್ನು ಕಳೆದುಕೊಂಡರೂ ಸಹ ಕೂಲಿನಾಲಿ ಮಾಡಿ ಮಕ್ಕಳನ್ನು ಸಲಹುತ್ತಿದ್ದ ಸುಧಾ ಅವರಿಗೆ ಇದೀಗ ಬರಸಿಡಿಲು ಬಡಿದಂತಾಗಿದ್ದು, ಮುದ್ದಿನ ಮಗಳನ್ನು ಉಳಿಸಿಕೊಳ್ಳಲು ದಾನಿಗಳ ನೆರವು ಬೇಡುತ್ತಿದ್ದಾರೆ.
ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮಗಳಿಗೆ ಪ್ರಾಥಮಿಕ ಚಿಕಿತ್ಸೆ, ಔಷಧಿಗಳನ್ನು ಒದಗಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹಣದ ಅವಶ್ಯಕತೆಯಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಇವರ ಸ್ಥಿತಿಗೆ ಮರುಗಿದ ಶಿವಾಜಿ ಯುವ ಸೇನೆಯ ಪದಾಧಿಕಾರಿಗಳಾದ ಎಸ್.ಎಂ. ಮಿಲನ್, ಬಿ.ಎಸ್. ಚಂದನ್, ಎಂ.ಎA. ಅಜಿತ್, ನಿಧಿ, ಕೆ.ಬಿ. ಅಭಿ, ಕೆ.ಜಿ. ದರ್ಶನ್, ಕೆ.ಇ. ನಿತಿನ್ ಅವರು ಗಳು ತಮ್ಮ ಕೈಲಾದ ಸಹಾಯ ಹಸ್ತ ಚಾಚಿದ್ದು, ಇದೀಗ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ೩೫ ಸಾವಿರ ಹಣವನ್ನು ಸಂಗ್ರಹಿಸಲಾಗಿದ್ದು, ಶಾಲಾ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳೊಂದಿಗೂ ಮನವಿ ಮಾಡುತ್ತಿದ್ದಾರೆ. ತೀರಾ ಸಂಕಷ್ಟದ ಸ್ಥಿತಿಯಲ್ಲಿರುವ ಸುಧಾ ಅವರ ಮಗಳಿಗೆ ನೆರವು ನೀಡಲು ಬಯಸುವವರು ಮಾದಾಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ನಾಗಂಡ ಸುಧಾ, ಖಾತೆ ಸಂಖ್ಯೆ: ೧೧೦೦೦೨೧೯೬೦೫೮, IಈSಅ: ಅಓಖಃ೦೦೧೧೧೦೩ ಇಲ್ಲಿಗೆ ಹಣ ಸಂದಾಯ ಮಾಡುವ ಮೂಲಕ ಸುಧಾ ಅವರ ಮಗಳ ಜೀವ ಉಳಿಸಲು ನೆರವಾಗಬಹುದಾಗಿದೆ.