ಸೋಮವಾರಪೇಟೆ, ನ. ೨: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹೊಸತೋಟದಿಂದ ಮಾದಾಪುರದವರೆಗೆ ನಿರ್ಮಾಣಗೊಳ್ಳುತ್ತಿರುವ ಚರಂಡಿ ಮತ್ತು ಮೋರಿ ಕಾಮಗಾರಿ ಕಳಪೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಇಲಾಖೆಯ ಗುಣ ನಿಯಂತ್ರಣ ಅಧಿಕಾರಿಗಳು ಭೇಟಿ ನೀಡಿ, ಮರು ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ೧೧ ಮೋರಿ ಹಾಗೂ ೪ ಕಿ.ಮೀ.ಉದ್ದದ ಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಮೋರಿ ನಿರ್ಮಾಣದ ಹಂತದಲ್ಲಿಯೇ ಬಿರುಕು ಬಿಟ್ಟಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಮಳೆ ನೀರು ಹರಿಯುವ ಕಡೆ ಚರಂಡಿ ಮತ್ತು ಮೋರಿ ವ್ಯವಸ್ಥೆ ಮಾಡದೆ ಸರಾಗವಾಗಿ ನೀರು ಹರಿಯುವ ಜಾಗದಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ಕಾಮಗಾರಿ ಆರಂಭದ ಮೊದಲಿಗೆ ಕಾಮಗಾರಿಯ ವೆಚ್ಚ ಮತ್ತು ವಿವರಗಳನ್ನು ನಾಮಫಲಕದಲ್ಲಿ ಸೂಚಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಅಳವಡಿಸಬೇಕಾಗಿತ್ತು. ಆದರೆ ಈ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಸ್ಥಳೀಯರು ದೂರಿದರು.
ಗುಣ ನಿಯಂತ್ರಣಾಧಿಕಾರಿ ಧನಂಜಯ್ ಮತ್ತಿತರರು ಕುಂಬೂರು ಜಂಕ್ಷನ್ ಬಳಿ ನಿರ್ಮಾಣ ಗೊಳ್ಳುತ್ತಿರುವ ಮೋರಿಯನ್ನು ಪರಿಶೀಲನೆ ನಡೆಸಿ, ಬಿರುಕುಬಿಟ್ಟ ಹಿನ್ನೆಲೆ ಹಾಗೂ ನಿಗದಿತ ಪ್ರಮಾಣ ದಲ್ಲಿ ಸ್ಟೀಲ್ರಾಡ್ ಅಳವಡಿಸದೇ ಇದ್ದುದರಿಂದ ಒಡೆದು ಹಾಕುವಂತೆ ಗುತ್ತಿಗೆದಾರರಿಗೆ ಸೂಚಿಸಿ, ಮರು ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದರು.
ಈ ಸಂದರ್ಭ ಆರ್.ಟಿ.ಐ. ಕಾರ್ಯಕರ್ತ ಬಗ್ಗನ ಅನಿಲ್, ರೈತ ಮುಖಂಡ ಮಚ್ಚಂಡ ಅಶೋಕ್, ಸುಂಠಿ ಚರಣ್, ಯಡೂರು ಲತೀಶ್, ಗರಗಂದೂರು ಲಕ್ಷö್ಮಣ್, ಕೆ.ಪಿ.ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.