ಮಡಿಕೇರಿ, ನ. ೧: ಕರ್ನಾಟಕ ರಾಜ್ಯೋತ್ಸವ ಆಚರಣೆ ಪರಿಪೂರ್ಣವಾಗಬೇಕಾದಲ್ಲಿ ಕೊಡವ ಜನಾಂಗ ಮುಂದಿಟ್ಟಿರುವ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ವತಿಯಿಂದ ಇಂದು ರಾಷ್ಟçದ ರಾಜಧಾನಿ ನವದೆಹಲಿಯಲ್ಲಿ ಸತ್ಯಾಗ್ರಹ ನಡೆಸಲಾಯಿತು.
ಕಳೆದ ಹಲವು ವರ್ಷಗಳಿಂದ ನವೆಂಬರ್ ೧ ರಂದು ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಂಘಟನೆ ಧರಣಿ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಪ್ರತಿಭಟನೆ ನಡೆಸಲಾಯಿತು.
ಸಂವಿಧಾನದ ವಿಧಿಯಡಿಯಲ್ಲಿ ಕೊಡವ ಲ್ಯಾಂಡ್ ಘೋಷಣೆ, ಬುಡಕಟ್ಟು ಸ್ಥಾನಮಾನದೊಂದಿಗೆ ರಾಜಕೀಯವಾಗಿ, ಸಂವಿಧಾನಾತ್ಮಕ ವಾಗಿ ಭದ್ರತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪುನರುಚ್ಚರಿಸಲಾಗಿದೆ. ಈ ಸಂದರ್ಭ ೨ನೇ ರಾಜ್ಯ ಮರು ಸಂಘಟನೆ ಆಯೋಗವನ್ನು ರಚಿಸುವಂತಾಗಬೇಕು. ಈ ಮೂಲಕ ೧೯೫೬ರ ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸಿ ‘ಸಿ’ ರಾಜ್ಯದಿಂದ ಸಂವಿಧಾನಾತ್ಮಕವಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ನಾಚಪ್ಪ ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವುದು, ರಾಜ್ಯಾಂಗ ಭದ್ರತೆಯೊಂದಿಗೆ ಹಕ್ಕು ಭಾದ್ಯತೆಗಳಿಗೆ ರಕ್ಷಣೆ ನೀಡುವುದು, ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತಿತರ ಬೇಡಿಕೆಗಳನ್ನು ಮುಂದಿರಿಸಿ ಸಂಬAಧಿಸಿದ ಪ್ರಮುಖರಿಗೆ ಮನವಿ ರವಾನಿಸಲಾಯಿತು.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಿವೃತ್ತ ಲೆ.ಕ. ಬಿ.ಎಂ. ಪಾರ್ವತಿ, ಮಚ್ಚಾರಂಡ ಸಿಂಧು, ಕಾಳಿಮಾಡ ಅಶ್ಮಿ, ಕರ್ತಂಡ ತೇಜ್, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ವಕೀಲ ಪಾಲಚಂಡ ಬ್ರಿಜೇಶ್ ಕಾಳಪ್ಪ, ಮದ್ರೀರ ಕರುಂಬಯ್ಯ, ಕರ್ತಂಡ ದಿಲನ್ ತಮ್ಮಯ್ಯ, ಮಾಚೆಟ್ಟಿರ ನವೀನ್ ಮತ್ತಿತರರು ಪಾಲ್ಗೊಂಡಿದ್ದರು.