ಗೋಣಿಕೊಪ್ಪಲು, ಅ ೩೧ : ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಗೋಣಿಕೊಪ್ಪ ನಗರದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ತನ್ನ ಕಾರಿನಲ್ಲಿ ಸಿಕ್ಕಿದ ೫ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಸಂಬAಧಿಸಿದ ಮಾಲೀಕರಿಗೆ ನೀಡುವ ಮೂಲಕ ಯೋಧರೋರ್ವರು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಘಟನೆ ಹಿನ್ನೆಲೆ: ಅ. ೩೦ ರಂದು ನಗರದ ಬೈಪಾಸ್ ಬಳಿಯ ಖಾಸಗಿ ಹೊಟೇಲ್ವೊಂದರಲ್ಲಿ ಕಾರ್ಯಕ್ರಮ ಆಯೋಜನೆ ಆಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಕುಟುಂಬವೊAದು ಆಗಮಿಸಿತ್ತು. ಆ ಕುಟುಂಬದ ಮಹಿಳೆ ತಮ್ಮ ಬಳಿ ಇದ್ದ ಆಭರಣದ ಬ್ಯಾಗ್ ಅನ್ನು ಜೋಪಾನವಾಗಿ ಇಡಲು ಅದೇ ಕಾರ್ಯಕ್ರಮದಲ್ಲಿದ್ದ ತನ್ನ ತಂದೆಯ ಸಹಾಯ ಕೇಳಿದರು.ಈ ವೇಳೆ ತಂದೆ ಬ್ಯಾಗನ್ನು ಬೈಪಾಸ್ ರಸ್ತೆಗೆ ತೆರಳಿ ಅಲ್ಲಿ ನಿಲ್ಲಿಸಲಾಗಿದ್ದ ತನ್ನ ಕಾರಿನಲ್ಲಿ ಇಡುವಂತೆ ಮಗಳಿಗೆ ತಿಳಿಸಿದ್ದಾರೆ.
ಈ ಕಾರು ಪಾರ್ಕಿಂಗ್ ಸ್ಥಳದಲ್ಲಿ ಯೋಧರಾದ ಕೊಲ್ಲಿರ ಸುಬ್ರಮಣಿ (ಚಾಮಿ) ಎಂಬವರು ಕೂಡ ತಮ್ಮ ಕಾರನ್ನು ನಿಲ್ಲಿಸಿದ್ದರು. ಅಲ್ಲಿಗೆ ತೆರಳಿದ ಮಹಿಳೆ ತನ್ನ ತಂದೆಯ ಕಾರು ಇದೇ ಇರಬಹುದು ಎಂದು ಭಾವಿಸಿ, ತಮ್ಮ ಬಳಿಯಿದ್ದ ಎರಡು ಬ್ಯಾಗನ್ನು ಯೋಧ ಸುಬ್ರಮಣಿ ಅವರ ಕಾರಿನ ಒಳಗೆ ಇಟ್ಟು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು.
ಕಾರ್ಯಕ್ರಮ ಮುಗಿಸಿದ ಬೆಂಗಳೂರಿನ ಕುಟುಂಬ ನೇರವಾಗಿ ಆಗಮಿಸಿ ತಮ್ಮ ತಂದೆಯ ಕಾರಿನಲ್ಲಿ ಕುಳಿತು ಬ್ಯಾಗ್ ಬಗ್ಗೆ ಪರಿಶೀಲಿಸದೆ ಮನೆಗೆ ತೆರಳಿದ್ದರು.
ಇತ್ತ ಕುಟ್ಟಂದಿ ಗ್ರಾಮದ ಯೋಧ ಸುಬ್ರಮಣಿ ತಮ್ಮ ಖಾಸಗಿ ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನ ಬಳಿ ಆಗಮಿಸಿ, ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಅದನ್ನು ಕಾರಿನಲ್ಲಿ ಇಡುವ ಸಂದರ್ಭ ಕಾರಿನ ಡಿಕ್ಕಿಯಲ್ಲಿ ಇದ್ದ ೨ ಬ್ಯಾಗನ್ನು ಕಂಡು ಕೆಲ ಕಾಲ ಗಾಬರಿಗೊಂಡಿದ್ದಾರೆ.
ಕೂಡಲೇ ತಮ್ಮ ಕುಟುಂಬದವರಾದ ಕುಟ್ಟಂದಿ ಗ್ರಾಮದ ಕೊಲ್ಲಿರ ಬೋಪಣ್ಣ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸಮೀಪದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೋಪಣ್ಣ ಹಾಗೂ ಕುಟ್ಟಂದಿ ಗ್ರಾಮಸ್ಥರು ಕಾರಿನ ಬಳಿ ತೆರಳಿ, ಸುಬ್ರಮಣಿ ಅವರ ಕಾರಿನಲ್ಲಿದ್ದ ಬ್ಯಾಗ್ನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಈ ವೇಳೆ ಬ್ಯಾಗ್ನಲ್ಲಿ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಇರುವುದನ್ನು ಗಮನಿಸಿ ಬ್ಯಾಗನ್ನು ಪ್ರಾಮಾಣಿಕವಾಗಿ ಕೂಡಲೇ ಪೊಲೀಸರಿಗೆ ಒಪ್ಪಿಸುವ ನಿರ್ಧಾರ ಕೈಗೊಂಡಿದ್ದಾರೆ.
ಇತ್ತ ಬೆಂಗಳೂರಿನ ಕುಟುಂಬ ದ.ಕೊಡಗಿನಲ್ಲಿರುವ ತಮ್ಮ ತಂದೆಯ ಮನೆಗೆ ತೆರಳಿ, ಕಾರಿನಿಂದ ಇಳಿದು ಬ್ಯಾಗ್ ತೆಗೆದುಕೊಳ್ಳಲು ನೋಡಿದಾಗ ಇಟ್ಟಿದ್ದ ಬ್ಯಾಗ್ ಅಲ್ಲಿ ಇರಲಿಲ್ಲ.
ತಂದೆಯ ಕಾರಿನಲ್ಲಿ ಇಡಬೇಕಾದ ಬ್ಯಾಗನ್ನು ಮತ್ತೊಂದು ಕಾರಿನಲ್ಲಿ ಇಟ್ಟಿರುವುದು ಇವರ ಗಮನಕ್ಕೆ ಬಂದಿರಲಿಲ್ಲ.
ಗಾಬರಿಗೊAಡ ಬೆಂಗಳೂರಿನ ಕುಟುಂಬ ತನ್ನ ತಂದೆಯ ಕಾರಿನೊಂದಿಗೆ ಮತ್ತೆ ಕಾರು ಪಾರ್ಕಿಂಗ್ ಮಾಡಿದ ಗೋಣಿಕೊಪ್ಪ ನಗರಕ್ಕೆ ಆಗಮಿಸಿದ್ದಾರೆ.
ಅಷ್ಟೊತ್ತಿಗಾಗಲೇ ಯೋಧ ಸುಬ್ರಮಣಿ ತಮಗೆ ಸಿಕ್ಕಿದ್ದ ಬ್ಯಾಗನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪೊಲೀಸರಿಗೆ ಒಪ್ಪಿಸಲು ತಯಾರಿ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ಬೆಂಗಳೂರಿನ ಕುಟುಂಬ ಬ್ಯಾಗ್ ಇಡುವ ಸಂದರ್ಭ ಕಾರು ಬದಲಾದ ಬಗ್ಗೆ ಖಚಿತ ಮಾಹಿತಿ ಒದಗಿಸಿತು. ಖಾತರಿಪಡಿಸಿಕೊಂಡ ಕುಟ್ಟಂದಿ ಗ್ರಾಮಸ್ಥರು ಚಿನ್ನಾಭರಣದ ಬ್ಯಾಗ್ನ್ನು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಮಾಲೀಕರಿಗೆ ನೀಡುವ ಮೂಲಕ ಪ್ರಾಮಾಣಿಕತೆೆ ಮೆರೆದರು. ಬ್ಯಾಗ್ ಕಳೆದುಕೊಂಡಿದ್ದ ಕುಟುಂಬ ಧನ್ಯಥಾ ಭಾವದೊಂದಿಗೆ ತೆರಳಿತು.
ಈ ವೇಳೆ ಬಿ. ಶೆಟ್ಟಿಗೇರಿ ಕುಟ್ಟಂದಿ ಗ್ರಾಮದ ಉಮೇಶ್ ಕೇಚಮಯ್ಯ, ಕೊಲ್ಲಿರ ಬೋಪಣ್ಣ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
-ಹೆಚ್.ಕೆ. ಜಗದೀಶ್