ಶನಿವಾರಸAತೆ, ನ. ೧: ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು, ತರಕಾರಿ ಹಾಗೂ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳಿಗೆ ಸಂತೆ ಮೇಳ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ ಎಂದು ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕಿ ಪದ್ಮಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆಯಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟ, ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸಂತೆಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಯೋಜನೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆರ್ಥಿಕವಾಗಿ ಬಲವರ್ಧನೆಗೊಳ್ಳಬೇಕು ಎಂದು ಅವರು ಕರೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೂವಯ್ಯ ಸಂತೆ ಮೇಳ ಉದ್ಘಾಟಿಸಿ, ಮಹಿಳೆಯರು ವ್ಯವಹಾರ ಜ್ಞಾನ ಗಳಿಸಿ ಆರ್ಥಿಕವಾಗಿ ಸಬಲೆಯರಾಗುವಂತೆ ಕರೆ ನೀಡಿದರು. ಕೊಡ್ಲಿಪೇಟೆ- ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕೂಟದ ಮಹಿಳಾ ಪ್ರತಿನಿಧಿಗಳು ಸೊಪ್ಪು - ತರಕಾರಿ, ಹಣ್ಣು - ಹಂಪಲು, ದಿನಸಿ ಸಾಮಾನು, ತಿಂಡಿ ತಿನಿಸು ಇತ್ಯಾದಿ ಪದಾರ್ಥಗಳನ್ನು ಸಂತೆ ಮೇಳದಲ್ಲಿ ವ್ಯಾಪಾರ ಮಾಡಿ ಗ್ರಾಹಕರ ಗಮನ ಸೆಳೆದರು. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯೆಯರಾದ ಲಾವಣ್ಯ, ಅಶ್ವಿನಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವೇದಾವತಿ, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎA. ಹನೀಫ್, ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ, ಒಕ್ಕೂಟದ ಎಂಬಿಕೆ, ಎಲ್‌ಸಿಆರ್‌ಪಿ ಹಾಗೂ ಸದಸ್ಯೆಯರು ಪಾಲ್ಗೊಂಡಿದ್ದರು.