ಮುಂಬೈ, ಅ. ೩೧ : ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ಉಂಟಾಗುವ ಯಾವುದೇ ಗಾಯ ಅಥವಾ ಹಾನಿಯು ತನ್ನ ಪ್ರಜೆಗಳನ್ನು ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯ ಎಂದು ಬಾಂಬೆ ಹೈಕೋರ್ಟ್ ಕಳೆದ ವಾರ ತೀರ್ಪು ನೀಡಿದೆ. ಕಾಡು ಹಂದಿಯೊAದು ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದು ಪತಿ ಸಾವನ್ನಪ್ಪಿದ ಮಹಿಳೆಗೆ ೧೦ ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಮಹಾರಾಷ್ಟç ಸರ್ಕಾರಕ್ಕೆ ಆದೇಶಿಸಿದೆ.

ರತ್ನಗಿರಿ ಜಿಲ್ಲೆಯ ಚಂದೇರಾಯ್ನ ನಿವಾಸಿ ಅನುಜಾ ಅರುಣ್ ರೆಡಿಜ್ ಅವರು ದಾಳಿಗೊಳಗಾದ ನಾಗರಿಕರಿಗೆ ಆರ್ಥಿಕ ನೆರವು ನೀಡಲು ಹೊರಡಿಸಿದ ಸರ್ಕಾರದ ನಿರ್ಣಯದ ಪ್ರಕಾರ (ಜಿಆರ್) ವಿತ್ತೀಯ ಪರಿಹಾರವನ್ನು ಕೋರಿ ಸಲ್ಲಿಸಿದ ಮನವಿಯ ಮೇಲೆ ನ್ಯಾಯಮೂರ್ತಿಗಳಾದ ಗೌತಮ್ ಎಸ್ ಪಟೇಲ್ ಮತ್ತು ಗೌರಿ ವಿ ಗೋಡ್ಸೆ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಕಳೆದ ಫೆಬ್ರವರಿ ೫, ೨೦೧೯ ರಂದು ಮಲ್ನಾಕಾದ ರತ್ನಗಿರಿಯಲ್ಲಿರುವ ಮಹಾರಾಷ್ಟç ರಾಜ್ಯ ರಸ್ತೆ ಸಾರಿಗೆ ಕಾರ್ಯಾಗಾರದಲ್ಲಿ ಹೆಡ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ರೆಡಿಜ್ ಅವರು ದ್ವಿಚಕ್ರವಾಹನದಲ್ಲಿ ರತ್ನಗಿರಿ ನಗರದಿಂದ ಚಂದೇರಾಯ್ ಗೆ ಪ್ರಯಾಣಿಸುತ್ತಿದ್ದರು.

ಆಗ ಪಕ್ಕದ ಕಾಡಿನಿಂದ ಏಕಾಏಕಿ ಬಂದ ಕಾಡು ಹಂದಿಯೊAದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಲ್ಲದೆ ಅರುಣ್ ಅವರ ಮೇಲೂ ಧಾಳಿ ನಡೆಸಿತ್ತು. ಗಂಭೀರ ಗಾಯಗಳಿಂದ ಗಾಯಾಳು ಸವಾರ ೫ಗÀಂಟೆಯ ನಂತರ ಮೃತಪಟ್ಟಿದ್ದರು. ಮಹಾರಾಷ್ಟç ಸರ್ಕಾರವು ಜುಲೈ ೧೧, ೨೦೧೮ ರಂದು ಆದೇಶವೊಂದನ್ನು ಹೊರಡಿಸಿದ್ದು ಆ ಪ್ರಕಾರ ಕಾಡು ಪ್ರಾಣಿಗಳಿಂದ ಮೃತರಾದರೆ ೧೦ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲು ಅವಕಾಶ ಕಲ್ಪಿಸಿತ್ತು.

ಅನುಜ್ ಅರುಣ್ ಅವರು ೨೦೧೯ ರ ಫೆಬ್ರವರಿ ತಿಂಗಳಿನಲ್ಲಿ ಉಪ ವಿಭಾಗೀಯ ಅರಣ್ಯ ಅಧಿಕಾರಿಯ ಮುಂದೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು, ಆದರೆ ಅಪಘಾತದ ಬಗ್ಗೆ ಅಪಘಾತವಾದ ೪೮ ಗಂಟೆಗಳ ಒಳಗೆ ಹತ್ತಿರದ ವಲಯ ಅರಣ್ಯಾಧಿಕಾರಿಗೆ ಮಾಹಿತಿ ನೀಡದ ಕಾರಣ ವಿಭಾಗೀಯ ಅಧಿಕಾರಿ ಅವರ ಪರಿಹಾರದ ಅರ್ಜಿಯನ್ನು ತಿರಸ್ಕರಿಸಿದರು. ಇದನ್ನು ಪ್ರಶ್ನಿಸಿ ಮೇಲ್ಮಟ್ಟದ ಅರಣ್ಯಾಧಿಕಾರಿಗಳಿಗೆ ಮತ್ತು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸದ ಕಾರಣ ಅನುಜಾ ಅವರು ಹೈಕೋರ್ಟಿನ ಮೊರೆ ಹೋಗಿದ್ದರು.

ವಾದ ವಿವಾದಗಳನ್ನು ಆಲಿಸಿದ ಪೀಠವು ಪರಿಹಾರ ನೀಡಿಕೆಗೆ ನೀಡಿರುವ ೪೮ ಗಂಟೆಗಳ ಗಡುವು ಅಪ್ರಸ್ತುತವಾಗಿದೆ. ಅಪಘಾತದಲ್ಲಿ ಮಾನವ ಜೀವ ನಾಶವಾಗಿದೆ, ಹೀಗಾಗಿ ಅಧಿಕಾರಿಗಳು ನೀಡಿದ ಕಾರಣಗಳು ಮತ್ತು ಅದರ ಸಂವಹನವು ಕಾನೂನುಬಾಹಿರ ಮತ್ತು ನ್ಯಾಯಸಮ್ಮತವಲ್ಲ ಎಂದು ತೀರ್ಪಿನಲ್ಲಿ ತಿಳಿಸಿದೆ.

ಯಾವುದೇ ಕಾಡುಪ್ರಾಣಿಯು ಯಾವುದೇ ವ್ಯಕ್ತಿಗೆ ಗಾಯವನ್ನುಂಟುಮಾಡಿದರೆ, ಇದು ಸಂವಿಧಾನದ ೨೧ ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಬದುಕುವ ಹಕ್ಕನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವಾಗಿದೆ ಎಂದು ಪೀಠ ತಿಳಿಸಿದೆ. ಅಲ್ಲದೆ ಪರಿಹಾರ ನಿರಾಕರಿಸಿ ಉಪ ವಿಭಾಗೀಯ ಅರಣ್ಯಾಧಿಕಾರಿ ನೀಡಿದ್ದ ಆದೇಶವನ್ನು ರದ್ದುಪಡಿಸಿ ಅರ್ಜಿದಾರರಿಗೆ ಅವರ ಪತಿಯು ಮೃತಪಟ್ಟ ಮೂರು ತಿಂಗಳ ನಂತರದಿAದ ಈವರೆಗೂ ಶೇಕಡಾ ೬ ರಂತೆ ಬಡ್ಡಿ ಸೇರಿಸಿ ೧೦ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ಆದೇಶಿಸಿದೆ.

-ಕೋವರ್‌ಕೊಲ್ಲಿ ಇಂದ್ರೇಶ್