ಮಡಿಕೇರಿ, ಅ. ೩೧: ವಿದೇಶದಿಂದ ಉಡುಗೊಡೆ ಕಳುಹಿಸುವುದಾಗಿ ನಂಬಿಸಿ ಮಹಿಳೆಯೋರ್ವರನ್ನು ವಂಚಿಸಿದ ಕುರಿತು ಕೊಡಗು ಜಿಲ್ಲಾ ಸೆನ್ ಠಾಣೆಯಲ್ಲಿ (ಸೈಬರ್) ಪ್ರಕರಣ ದಾಖಲಾಗಿದೆ.
ವಾಟ್ಸಾಪ್ ಮೂಲಕ ಪರಿಚಯ ವಾದ ವಂಚಕನೋರ್ವ ಗೆಳೆತನ ಬೆಳೆಸಿ ವಿದೇಶದಿಂದ ಉಡುಗೊರೆ ಕಳುಹಿಸುವು ದಾಗಿ ನಂಬಿಸಿ ಗೃಹಿಣಿಯಿಂದ ೬.೮೩ ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದನೆನ್ನಲಾಗಿದೆ.
ಗೋಣಿಕೊಪ್ಪ ವೆಂಕಟಪ್ಪ ಲೇಔಟ್ ನಿವಾಸಿ ಸಿ.ಹೆಚ್. ಸುಶೀಲ (೫೪) ವಂಚನೆಗೊಳಗಾದ ಗೃಹಿಣಿಯಾಗಿದ್ದು, ಇವರಿಗೆ ವಾಟ್ಸಾಪ್ ಮೂಲಕ ಪರಿಚಯವಾದ ಜಾನ್ ವಿಲಯಮ್ಸ್ ಎಂಬ ವ್ಯಕ್ತಿ ನಿರಂತರವಾಗಿ ಚಾಟ್ ಮಾಡಿ ಗೆಳೆತನ ಬೆಳೆಸಿದ್ದಾನೆ. ನಂತರ ಸುಶೀಲ ಅವರ ಮನೆ ವಿಳಾಸ ಪಡೆದ ಆತ ಉಡುಗೊರೆ ಕಳುಹಿಸುವುದಾಗಿ ಕೆಲವು ಫೋಟೋಗಳನ್ನು ರವಾನಿಸಿದ್ದಾನೆ. ಮರು ದಿನವೇ ಕಸ್ಟಮ್ಸ್ನಿಂದ ಮಾತನಾಡುತ್ತಿರುವುದಾಗಿ ಕರೆ ಮಾಡಿದ ವ್ಯಕ್ತಿ ವಿದೇಶದಿಂದ ಪಾರ್ಸಲ್ ಬಂದಿದ್ದು, ಅದನ್ನು ಬಿಡಿಸಿಕೊಳ್ಳಲು ಶುಲ್ಕ ಕಟ್ಟಬೇಕು ಎಂದು ಹೇಳಿದ್ದಾನೆ. ಅವರು ಆನ್‌ಲೈನ್ ಮೂಲಕ ಆತ ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಿದ ನಂತರ ನಿರಂತರವಾಗಿ ಅ. ೧೫ರ ವರೆಗೆ ವಿವಿಧ ಶುಲ್ಕಗಳು ಎಂದು ಒಟ್ಟು ೬.೮೩ ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ ಎಂದು ವರದಿಯಾಗಿದೆ.