ಮಡಿಕೇರಿ, ಅ. ೨೯: ಕೊಡಗು ಜಿಲ್ಲೆಯ ದೇವಸ್ಥಾನಗಳಲ್ಲಿ ಇದೀಗ ಗಂಟೆಗಳ ಕಳವು ಪ್ರಕರಣ ಜನರ ಹಾಗೂ ಪೊಲೀಸರ ನಿದ್ದೆ ಕೆಡಿಸಿದೆ. ಎರಡಲ್ಲ ಮೂರಲ್ಲ ಕೇವಲ ಒಂದು ವಾರದೊಳಗೆ ಒಂದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ನಾಲ್ಕು ದೇವಸ್ಥಾನಗಳಲ್ಲಿ ಗಂಟೆಗಳು ಕಳ್ಳತನವಾಗಿದೆ. ಮಾತ್ರವಲ್ಲ ತಿಂಗಳು ತುಂಬುವ ಹೊತ್ತಿಗೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ದೇವಸ್ಥಾನ ಕಳ್ಳತನ ನಡೆದಿದ್ದು, ಗಂಟೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಹಲವೆಡೆ ದೇವಸ್ಥಾನಗಳಲ್ಲಿ ಗಂಟೆ ಕಳ್ಳತನವಾಗುತ್ತಿದ್ದು, ಈ ಜಾಲವನ್ನು ತ್ವರಿತವಾಗಿ ಪತ್ತೆಹಚ್ಚಲು ಆಗ್ರಹಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸರಹದ್ದುವಿನಲ್ಲಿಯೇ ಒಂದು ವಾರದೊಳಗೆ ನಾಲ್ಕು ದೇವಸ್ಥಾನಗಳಲ್ಲಿ ಗಂಟೆಗಳು ಕಳ್ಳತನವಾಗಿದೆ. ಒಂದು ತಿಂಗಳ ಹಿಂದೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನ ಸೇರಿದಂತೆ ಒಟ್ಟು ಐದು ದೇವಸ್ಥಾನಗಳಲ್ಲಿಯೂ ಕೂಡ ಕೇವಲ ಗಂಟೆಗಳನ್ನು ಮಾತ್ರ ಕಳ್ಳತನ ಮಾಡಲಾಗಿದೆ. ಇದರ ಉದ್ದೇಶ ಏನು ಎಂದು ಅರ್ಥ ಆಗುತ್ತಿಲ್ಲ ಎಂದಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಶ್ರೀ ಕಮಟೆ ಮಹಾದೇವರ ದೇವಸ್ಥಾದಲ್ಲಿ ಅಳವಡಿಸಲಾದ ೧೦೫ ಕೆ.ಜಿ.ಯ ಬೃಹತ್ ಗಾತ್ರದ ಗಂಟೆಯನ್ನು ಕಳವು ಮಾಡಿದ್ದು, ರಾತ್ರಿ ಬಂದ ಕಳ್ಳರು ದೇವಸ್ಥಾನದಲ್ಲಿ ಅಳವಡಿಸಲಾದ ಸಿ.ಸಿ ಕ್ಯಾಮರಾವನ್ನು ತಿರುಗಿಸಿ ಕಳ್ಳತನ ಮಾಡಿ ಗಂಟೆಯನ್ನು ಕೊಂಡೊಯ್ದಿದ್ದಾರೆ. ಕಳೆದ ತಿಂಗಳು ನಾಪೋಕ್ಲುವಿನ ಮಕ್ಕಿ ಶಾಸ್ತಾವು ದೇವರ ಸನ್ನಿಧಿಯಲ್ಲಿ ಬೃಹತ್ ಗಾತ್ರದ ಗಂಟೆಗಳನ್ನು ಕಳ್ಳತನ ಮಾಡುವ ಮೂಲಕ ಆರಂಭವಾದ ಗಂಟೆಗಳ ಕಳ್ಳತನ ಇದೀಗ ದÀಕ್ಷಿಣ ಕೊಡಗಿನಲ್ಲಿ ಸದ್ದು ಮಾಡುತ್ತಿದೆ.

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೂರು ಕಲ್ಲುಗುಡಿ ಈಶ್ವರ ದೇವಸ್ಥಾನದಲ್ಲಿ ೫ ಕಂಚಿನ ಗಂಟೆ ಹಾಗೂ ಬೆಸಗೂರು ಗ್ರಾಮದ ಮಹಾದೇವರ ದೇವಸ್ಥಾನ ಮತ್ತು ದುರ್ಗಿ ದೇವಸ್ಥಾನ ಎರಡು ಸೇರಿ ೨೧ ಕಂಚಿನ ಗಂಟೆಗಳು ಕಳವಾಗಿದೆ. ಪೊಲೀಸರು ಇದರ ಹುಡುಕಾಟದಲ್ಲಿ ಇರುವಾಗಲೇ ಮತ್ತೆ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನಲ್ಲಿ ಸುಮಾರು ೯೦೦ ವರ್ಷಕ್ಕೂ ಹಿಂದಿನ ಇತಿಹಾಸವಿರುವ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಗುರುವಾರ ಮಧ್ಯರಾತ್ರಿ ಕಳ್ಳರು ನುಗ್ಗಿದ್ದು, ೧೦ ಗಂಟೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯ ಒಂದಷ್ಟು ತುಣುಕುಗಳು ದೇವಸ್ಥಾನದಲ್ಲಿ ಅಳವಡಿಸಲಾದ ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಬಳಿಕ ಒಬ್ಬ ಮುಸುಕುಧಾರಿ ಎರಡು ಸಿ.ಸಿ. ಕ್ಯಾಮರಾದ ವಯರ್ ತುಂಡರಿಸಿದ್ದಾನೆ ಎನ್ನಲಾಗಿದೆ.

ದೇವಸ್ಥಾನದಲ್ಲಿ ಒಟ್ಟು ನಾಲ್ಕು ಕ್ಯಾಮರಾಗಳಿದ್ದು, ಉಳಿದ ಎರಡು ಕ್ಯಾಮರಾಗಳನ್ನು ಬೇರೆಡೆಗೆ ತಿರುಗಿಸಿ, ದೇವಸ್ಥಾನದ ಮುಂಭಾಗ ಅಳವಡಿಸಲಾದ ಹದಿಮೂರು ಕಂಚಿನ ಗಂಟೆಗಳ ಪೈಕಿ ೧೦ ದೊಡ್ಡ ದೊಡ್ಡ ಗಂಟೆಗಳನ್ನು ಕದ್ದು ಪರಾರಿಯಾಗಿದ್ದು, ಮೂರು ಸಣ್ಣ ಗಂಟೆಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆಗೆ ಊರಿನವರು ಬರುವಾಗ ಗಂಟೆಗಳು ಕಳವಾಗಿರುವುದು ಗೋಚರವಾಗಿದೆ. ಬಳಿಕ ಸಿ.ಸಿ. ಕ್ಯಾಮರಾವನ್ನು ಪರಿಶೀಲಿಸಿದಾಗ ರಾತ್ರಿ ೨.೧೫ಕ್ಕೆ ಇಬ್ಬರು ಕಳ್ಳರು ಕಾಂಪೌAಡ್ ಒಳ ಬಂದಿರುವುದು ಪತ್ತೆಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ದೂರಿನ ಮೇರೆ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಗೋಣಿಕೊಪ್ಪಲು ವೃತ್ತ ನಿರೀಕ್ಷಕರನ್ನೊಳಗೊಂಡ ತಂಡ, ಜಿಲ್ಲಾ ಅಪರಾಧ ದಳದ ತಂಡ ಸೇರಿದಂತೆ ವೀರಾಜಪೇಟೆ ಡಿವೈಎಸ್ಪಿ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳ ತಂಡವೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.

ಜಿಲ್ಲೆಯಲ್ಲಿ ಕಳವಾದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿಯೂ ಒಂದೇ ರೀತಿಯ ಕೃತ್ಯ ನಡೆದಿದ್ದು, ರಾತ್ರಿ ಕಳೆದು ಬೆಳಕು ಹರಿಯುವ ಮೊದಲೇ ಗಂಟೆಗಳು ಮಾಯವಾಗುತ್ತಿರುವ ಉದ್ದೇಶ ಏನು ಎಂಬುದೇ ಪ್ರಶ್ನೆಯಾಗಿದ್ದು, ದೇವಸ್ಥಾನದಲ್ಲಿ ಬೇರೆ ಯಾವುದೇ ವಸ್ತು ಅಥವಾ ದೇವಸ್ಥಾನದ ಹುಂಡಿಗಳು ಕಳವಾಗದೆ ಹಾಗೇ ಬಿಟ್ಟಿರುವುದೂ ಆಶ್ಚರ್ಯ ಎನ್ನಬಹುದಾಗಿದೆ. ಈ ಗಂಟೆ ಕಳವಿನ ಹಿಂದೆ ದೊಡ್ಡ ಜಾಲವೇ ಇದ್ದು ಇದರ ಹಿಂದಿನ ಮರ್ಮವೇನು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ.

ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸುವ ವಿಶ್ವಾಸವಿದೆ ಎಂದು ಚಮ್ಮಟೀರ ಪ್ರವೀಣ್ ಉತ್ತಪ್ಪ ಹೇಳಿದ್ದು ಅಲ್ಲಿಯತನಕ ಊರಿನ ದೇವಸ್ಥಾನಗಳಲ್ಲಿನ ಗಂಟೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.