ಗಡಿ ದಾಟಲು ಯತ್ನಿಸುತ್ತಿದ್ದ ಪಾಕ್ ನಾಗರಿಕ ಗುಂಡೇಟಿಗೆ ಬಲಿ

ಜೈಪುರ, ಅ. ೨೯: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನುಪ್‌ಗಢ ಸೆಕ್ಟರ್‌ನಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಪಾಕಿಸ್ತಾನದ ನಾಗರಿಕನನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಗಡಿ ಭದ್ರತಾ ಪಡೆ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಪಾಕಿಸ್ತಾನಿ ನಾಗರಿಕನೊಬ್ಬ ಭಾರತ ಪ್ರವೇಶಿಸಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಗಡಿ ಪ್ರವೇಶಿಸದಂತೆ ಯೋಧರು ಎಚ್ಚರಿಸಿದರೂ ನಿಲ್ಲಿಸದೆ ಇದ್ದಾಗ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಶ್ರೀಗಂಗಾನಗರ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮಾ ತಿಳಿಸಿದ್ದಾರೆ. ಈ ಸಂಬAಧ ಅನುಪ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಆತನ ಬಳಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ನ. ೧ ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ

ಬೆಂಗಳೂರು, ಅ. ೨೯: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಮಾರಂಭದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರು ಭಾಗವಹಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಶನಿವಾರ ತಿಳಿಸಿದ್ದಾರೆ. ಸಚಿವ ಅಶೋಕ್ ನೇತೃತ್ವದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಮಿತಿ ರಚಿಸಲಾಗಿದ್ದು, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಇಂದು ಸಭೆ ನಡೆಸಲಾಯಿತು. ಸಭೆಯ ನಂತರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ಅವರು, ರಾಜ್ಯೋತ್ಸವ ದಿನದಂದು ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ಧೂರಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಕರ್ನಾಟಕ ರತ್ನ ಪ್ರಶಸ್ತಿಯ ಪದಕ ಪೂರ್ಣ ಬೆಳ್ಳಿಯಲ್ಲಿ ಇರುತ್ತದೆ. ೫೦ ಗ್ರಾಂ ಚಿನ್ನದ ಪದಕ ಕೂಡ ಇರಲಿದೆ. ಈ ಮುಂಚೆ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡುವ ಯೋಜನೆ ಇತ್ತು. ಆದರೆ ಅವರ ಸಹೋದರ, ಕುಟುಂಬದ ಆಶಯದ ಮೇರೆಗೆ ವಿಧಾನಸೌಧದ ಮುಂಭಾಗದಲ್ಲಿ ಮಾಡಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು. ಈವರೆಗೆ ಎಂಟು ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. ೨೦೦೯ರ ನಂತರ ಈಗ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರದ ಅಂಕುಶ

ನವದೆಹಲಿ, ಅ. ೨೯: ಯಾವುದೇ ಸಾಮಾಜಿಕ ಜಾಲತಾಣಗಳು ಭಾರತೀಯ ಕಾನೂನಿಗನುಸಾರವಾಗಿ ನಡೆದುಕೊಳ್ಳಬೇಕು. ಭಾರತದ ಸಂವಿಧಾನದ ನಿಬಂಧನೆಗಳು ಮತ್ತು ಭಾರತದ ಸಾರ್ವಭೌಮ ಕಾನೂನುಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸುವ ಹೊಸ ಐಟಿ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ತಪ್ಪು ಮಾಹಿತಿಗಳು ದೇಶದ ಸಮಗ್ರತೆ, ಭದ್ರತೆಗೆ ಧಕ್ಕೆ ತರುವಂತಹ ಸಂದೇಶಗಳು, ಲೈಂಗಿಕ ದೌರ್ಜನ್ಯದ ವಿಚಾರಗಳನ್ನು ಹರಡುವುದಕ್ಕೆ ಕಡಿವಾಣ ಹಾಕಲು ಈ ಹೊಸ ಐಟಿ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಕೇಂದ್ರದ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದ ದಿಗ್ಗಜ ಟ್ವಿಟರ್ ಕಂಪೆನಿ ತನ್ನ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಭಾರತೀಯರನ್ನು ವಜಾಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಐಟಿ ನೀತಿಗೆ ತಿದ್ದುಪಡಿ ತಂದು ಈ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಕಡಿವಾಣಕ್ಕೆ ಮುಂದಾಗಿದೆ.

ಲೈAಗಿಕ ದೌರ್ಜನ್ಯ ಪ್ರಕರಣ : ಪರಮಶಿವಯ್ಯ ಬಂಧನ

ಚಿತ್ರದುರ್ಗ, ಅ. ೨೯: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿರುವ ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ ನಾಲ್ಕನೇ ಆರೋಪಿ, ಕಳೆದ ಎರಡು ತಿಂಗಳಿAದ ತಲೆಮರೆಸಿಕೊಂಡಿದ್ದ ಎಸ್‌ಜೆಎಂ ವಿದ್ಯಾಪೀಠದ ಮಾಜಿ ಕಾರ್ಯದರ್ಶಿ ಪರಮಶಿವಯ್ಯ ಅವರನ್ನು ಪೊಲೀಸರು ಕೊನೆಗೂ ಶನಿವಾರ ಬಂಧಿಸಿದ್ದಾರೆ. ಪರಮಶಿವಯ್ಯ ಅವರನ್ನು ಇಂದು ಬಂಧಿಸಲಾಗಿದ್ದು, ತನಿಖಾ ತಂಡ ಡಿವೈಎಸ್‌ಪಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಸಿತು. ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿತು. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರು ಆರೋಪಿಗಳ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆಗಸ್ಟ್ ೨೮ ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಪರಮಶಿವಯ್ಯ ಅವರನ್ನು ಎರಡು ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ. ನಿನ್ನೆಯಷ್ಟೇ ಮುರುಘಾ ಶ್ರೀಗಳ ವಿರುದ್ಧ ೬೯೪ ಪುಟಗಳ ಆರೋಪಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿ, ಅ. ೨೯: ಸಾಕಷ್ಟು ಗೊಂದಲಗಳ ನಡುವೆ ಹಾವೇರಿಯಲ್ಲಿ ಮುಂದಿನ ವರ್ಷ ಜನವರಿ ೬, ೭ ಮತ್ತು ೮ ರಂದು ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಇಂದು ಹಾವೇರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು ಕನ್ನಡ ಸಾಹಿತ್ಯ ಸಮ್ಮೇಳದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ಸುನೀಲ್ ಕುಮಾರ್ ಅವರು, ಸಿಎಂ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ಮೂರು ಲಕ್ಷ ಜನರು ಬರುವ ನಿರೀಕ್ಷೆಯಿದೆ. ನಗರದಲ್ಲಿ ಕನಿಷ್ಟ ೨೫ ಸಾವಿರ ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ‘ಕನಕ - ಷರೀಫ - ಸರ್ವಜ್ಞ’ ಹೆಸರಿನ ಪ್ರಧಾನ ವೇದಿಕೆ ಹಾಗೂ ‘ಪಾಪು -ಚಂಪಾ’ ಮತ್ತು ‘ಹೊಸಮನಿ ಸಿದ್ದಪ್ಪ - ಮಹದೇವ ಬಣಕಾರ’ ಹೆಸರಿನ ಎರಡು ಉಪ ವೇದಿಕೆಗಳನ್ನು ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪತ್ರಕರ್ತರಿಗೆ ನಗದು ಉಡುಗೊರೆ - ತನಿಖೆ ಸಾಧ್ಯತೆ

ಬೆಂಗಳೂರು, ಅ. ೨೯: ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ ೧ ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವ ಆರೋಪ ಕೇಳಿಬಂದಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಸಿಎಂಒ ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳು ಕ್ಷಮೆ ಕೋರಿದ್ದು ತಮಗೆ ನಗದು ಉಡುಗೊರೆ ಬಗ್ಗೆ ಮಾಹಿತಿ ಇರಲಿಲ್ಲ ಈ ಬಗ್ಗೆ ತನಿಖೆಗೆ ಆದೇಶಿಸುತ್ತಿರುವುದಾಗಿ ತಿಳಿದುಬಂದಿದೆ. ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರು ತಮಗೆ ಅ.೨೨ ರಂದು ಹಬ್ಬದ ಉಡುಗೊರೆ ಬಾಕ್ಸ್ಗಳಲ್ಲಿ ಸಿಹಿ ಹಾಗೂ ಡ್ರೆöÊಫ್ರೂಟ್ಸ್ ಇರುವ ಬಾಕ್ಸ್ಗಳು ಹಾಗೂ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಬಂದಿತ್ತು ಎಂದು ಆರೋಪಿಸಿದ್ದರು. ಲಕೋಟೆಯಲ್ಲಿ ಒಂದು ಲಕ್ಷ ರೂಪಾಯಿ ಹಣ ಬಂದಿದ್ದು ಪತ್ರಕರ್ತರ ವಲಯದಲ್ಲಿ ಅಚ್ಚರಿ ಹಾಗೂ ಆಕ್ರೋಶಗಳಿಗೆ ಕಾರಣವಾಗಿತ್ತು. ಕೆಲವು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿ ನಗದು ಉಡುಗೊರೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಸಿಎಂಒಗೆ ಬರೆದಿದ್ದರು.