ಮಡಿಕೇರಿ, ಅ. ೨೮: ಯರವ ಜನಾಂಗಕ್ಕೆ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಯರವ ಯುವ ಒಕ್ಕೂಟದ ಕೊಡಗು ಜಿಲ್ಲಾ ಘಟಕ ಕನ್ನಡ ರಾಜ್ಯೋತ್ಸವದ ದಿನವಾದ ನ.೧ ರಂದು ಅರೆಬೆತ್ತಲೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಯುವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ, ಯರವರ ಕಡೆಗಣನೆಯನ್ನು ಖಂಡಿಸಿ ಗೋಣಿಕೊಪ್ಪದಿಂದ ಮಡಿಕೇರಿವರೆಗೆ ಸಾಂಪ್ರದಾಯಿಕ ಚೀನಿ ದುಡಿ ಬಡಿದುಕೊಂಡು ಅರೆಬೆತ್ತಲೆ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವ ಮೂಲಕ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಇದಕ್ಕೂ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೃಷಿ ಕಾರ್ಯದ ಮೂಲಕ ಜೀವನ ಸಾಗಿಸಲು ಪ್ರತಿ ಯರವ ಕುಟುಂಬಕ್ಕೆ ೫ ಎಕರೆ ಜಮೀನು ಮಂಜೂರು ಮಾಡಬೇಕು. ಯರವ ಯುವಕ-ಯುವತಿಯರಿಗೆ ಶಿಕ್ಷಣಕ್ಕೆ ಅನುಗುಣವಾಗಿ ಸರ್ಕಾರಿ ನೌಕರಿ ನೀಡಬೇಕು. ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜಿಲ್ಲಾಡಳಿತದ ಮೂಲಕ ಸರ್ಕಾರದ ಮುಂದಿಡುವುದಾಗಿ ಮುತ್ತ ತಿಳಿಸಿದ್ದಾರೆ. ಅರೆಬೆತ್ತಲೆ ಪಾದಯಾತ್ರೆಯಲ್ಲಿ ನೂರಾರು ಯರವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.