ಮಡಿಕೇರಿ, ಅ. ೨೭: ಕೊಡಗಿನಲ್ಲಿ ಜನರ ಪರವಾಗಿ ಕೆಲಸ ಮಾಡಲು ತಾನು ಮೊದಲು ಆದ್ಯತೆ ನೀಡುವುದಾಗಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಎಸ್. ಆಕಾಶ್ ಹೇಳಿದರು.

ನೂತನ ಸಿಇಓ ಆಗಿ ಇಂದು ನಿರ್ಗಮಿತ ಸಿಇಓ ಭಂವರ್ ಸಿಂಗ್ ಮೀನಾ ಅವರಿಂದ ಅಧಿಕಾರ ಸ್ವೀಕರಿಸಿದ ಆಕಾಶ್ ಅವರು ‘ಶಕ್ತಿ’ಯೊಂದಿಗೆ ಮಾತನಾಡಿದರು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ಅಧಿಕಾರಿಗಳ ಸಭೆ ಕರೆದು ಮುಂದಡಿ ಇಡಲಾಗುವುದು ಎಂದು ಆಕಾಶ್ ತಿಳಿಸಿದರು. ತಾನು ನೆರೆಯ ಮೈಸೂರು ಜಿಲ್ಲೆಯವನೆ ಆಗಿದ್ದು, ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಇಲ್ಲಿನ ಜನರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಇರಾದೆ ಹೊಂದಿರುವುದಾಗಿ ಅವರು ಹೇಳಿದರು.

೨೦೧೯ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಡಾ. ಆಕಾಶ್ ಅವರು ಮೂಲತಃ ಮೈಸೂರಿನ ಮೇಟಗಳ್ಳಿಯವರಾಗಿದ್ದಾರೆ. ಗುಲ್ಬರ್ಗದಲ್ಲಿ ತರಬೇತಿ ಮುಗಿಸಿದ ಅವರು ಈ ಹಿಂದೆ ಬಳ್ಳಾರಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.