ನಾಪೋಕ್ಲು, ಅ. ೨೭: ಹಸುವನ್ನು ಮೇಯಲು ಕಟ್ಟುವ ಸಂದರ್ಭ ಗದ್ದೆ ಬದಿಯಲ್ಲಿದ್ದ ಕೆರೆಗೆ ಯುವತಿಯೋರ್ವಳು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಮೀಪದ ಕೋಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುಕ್ಕಾಟಿ ಕುಶಾಲಪ್ಪ ಮತ್ತು ದಾಕ್ಷಾಯಿಣಿ ದಂಪತಿಗಳ ಪುತ್ರಿ ಚಸ್ಮಿಕಾ (೨೦) ಮೃತ ದುರ್ದೈವಿ. ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಚಸ್ಮಿಕಾ ದೀಪಾವಳಿ ಪ್ರಯುಕ್ತ ಬುಧವಾರ ಕಾಲೇಜಿಗೆ ರಜೆಯಿದ್ದ ಕಾರಣ ಮನೆ ಸಮೀಪದ ಗದ್ದೆಯಲ್ಲಿ ಹಸುವನ್ನು ಮೇಯಲು ಕಟ್ಟಲು ತೆರಳಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಎಂ.ಕೆ.ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹವನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ನಾಪೋಕ್ಲುವಿನ ಯುವಕರಾದ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್, ಶಮೀರ್ ಮೃತ ದೇಹವನ್ನು ಹೊರತೆಗೆಯಲು ಸಹಕರಿಸಿದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮೃತಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.