ಕೂಡಿಗೆ, ಅ. ೨೭: ಕೂಡಿಗೆ ಸೈನಿಕ ಶಾಲೆಯಲ್ಲಿ ಮರಿಯಪ್ಪ ಕೆಂಪಯ್ಯ ಫುಟ್ಬಾಲ್ ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಕ್ರೀಡಾಂಗಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾವೇರಿ ಮತ್ತು ಹಾರಂಗಿ ತಂಡಗಳ ನಡುವೆ ಸೌಹಾರ್ದಯುತ ಫುಟ್ಬಾಲ್ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಕಾವೇರಿ ತಂಡವು ೧-೦ ಗೋಲುಗಳೊಂದಿಗೆ ಜಯಗಳಿಸಿತು. ನಂತರ ಅತಿಥಿಗಳು ಫುಟ್ಬಾಲ್ ಕ್ರೀಡಾಪಟುಗಳನ್ನು ಸನ್ಮಾನಿಸಿದರು.
ಶಾಲೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೆರೆದಿದ್ದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮನವೇಂದ್ರ ಸಿಂಗ್, ಶಾಲೆಯ ಮೂಲಭೂತ ಸೌಕರ್ಯ ಗಳನ್ನು ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಪ್ರಸ್ತುತ ಶಾಲೆಯ ಭೇಟಿಯು ಆಹ್ಲಾದಕರವಾದ ವಾತಾವರಣವನ್ನು ನಿರ್ಮಾಣ ಮಾಡಿದೆ. ಶಾಲೆಯು ಅಂರ್ರಾಷ್ಟಿçÃಯ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಉತ್ತಮವಾದ ಬೋಧಕವರ್ಗ ಮತ್ತು ತರಬೇತಿ ವಿಭಾಗವನ್ನು ಹೊಂದಿದೆ ಎಂದು ತಿಳಿಸಿದರು.
ಈ ವ್ಯವಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಪ್ರಸ್ತುತ ಶಾಲೆಯಲ್ಲಿ ದಾಖಲಾತಿಯನ್ನು ಪಡೆದಿರುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳಾಗಿದ್ದು, ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಯೋಜಿತ ರೀತಿಯಲ್ಲಿ ಬಳಸಿಕೊಂಡು ಸಾಧನೆ ಗೈಯ್ಯಬೇಕೆಂದು ತಿಳಿ ಹೇಳಿದರು. ಜೀವನದಲ್ಲಿ ಮುಂದುವರೆಯಲು ಅತ್ಯುತ್ತಮವಾದ ದೈಹಿಕದಾರ್ಢ್ಯತೆ ಅವಶ್ಯಕವಾಗಿದೆ. ಇದರೊಂದಿಗೆ ತಾವು ಶೈಕ್ಷಣಿಕ ಸಾಧನೆಯನ್ನು ಮೈಗೂಡಿಸಿ ಕೊಂಡು, ಸ್ವಯಂ ಅಧ್ಯಯನ, ಶಿಸ್ತು, ಸಂಯಮ ಮತ್ತು ಅವಕಾಶಗಳ ಸದುಪಯೋಗಪಡೆದುಕೊಂಡು ಸೇನಾ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇರ್ಪಡೆಗೊಳ್ಳಬೇಕೆಂದು ಕಿವಿಮಾತು ಹೇಳಿದರು. ತಾವುಗಳು ಸೇನಾ ಇಲಾಖೆಗೆ ಸೇರ್ಪಡೆಗೊಂಡರೆ ಹಲವು ಅವಕಾಶಗಳು ಸ್ವತಃ ತಮ್ಮನ್ನು ಅರಸಿ ಬರುತ್ತವೆ. ಈ ಅವಕಾಶಗಳ ಮೂಲಕ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬದುಕಬಹುದೆಂದು ಪ್ರೇರೇಪಣೆ ನೀಡಿದರು.
ಹಾಗೆಯೇ ಮುಖ್ಯ ಅತಿಥಿಗಳು ಶಾಲೆಯ ಅಭಿವೃದ್ಧಿಗೆ ಬೇಕಾಗಿರುವ ಎಲ್ಲಾ ವಿಧದ ಸಹಕಾರವನ್ನು ನಮ್ಮ ಟ್ರೆöÊನಿಂಗ್ ಕಮಾಂಡ್ ನೀಡಲಿದೆ ಎಂದು ಆಶ್ವಾಸನೆಯನ್ನು ಈ ಸಂದರ್ಭದಲ್ಲಿ ನೀಡಿದರು. ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ ೬ನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ತಮ್ಮದೇ ಆದ ನೂತನ ತರಬೇತಿಯ ಮೂಲಕ ಒಬ್ಬ ಆದರ್ಶ ನಾಗರಿಕನನ್ನಾಗಿ ಮಾಡುವಲ್ಲಿ ಶಾಲೆಯಲ್ಲಿನ ಅಧಿಕಾರಿವರ್ಗ, ಬೋಧಕ ಮತ್ತು ಬೋಧಕೇತರ ವರ್ಗದವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಹೆಣ್ಣು ಮಕ್ಕಳಿಗೆ ಸೇನಾ ಇಲಾಖೆಯಲ್ಲಿ ಹಲವು ಅವಕಾಶಗಳಿದ್ದು, ಅವುಗಳನ್ನು ಶಾಲೆಯ ಹೆಣ್ಣು ಮಕ್ಕಳು ಸೇನೆಗೆ ಸೇರುವುದರ ಮೂಲಕವಾಗಿ ಅವುಗಳ ಸದುಪಯೋಗ ಪಡೆದುಕೊಳ್ಳ ಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮನ್ಪ್ರೀತ್ ಸಿಂಗ್, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೆಡೆಟ್ ಎಸ್ ದಿವಾಕರ್ ನಿರೂಪಿಸಿ, ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲರು ವಂದಿಸಿದರು.