ಮಡಿಕೇರಿ, ಅ. ೨೮: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದೊಳಗೆ ಪಾಲಿಸಬೇಕಾಗಿರುವ ನಿಯಮಗಳನ್ನು ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಅರಿವು ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ಹಾಗೂ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದಿAದ ಜಾಗೃತಿ ಮೂಡಿಸಲಾಯಿತು. ರಕ್ಷಿತಾರಣ್ಯದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ “ಡೂಸ್ ಆ್ಯಂಡ್ ಡೋಂಟ್ಸ್”ನ ವಿಚಾರವಾಗಿ ಹೊರತರಲಾದ ಭಿತ್ತಿಪತ್ರವನ್ನು ಈ ಸಂದರ್ಭ ಅನಾವರಣಗೊಳಿಸಲಾಯಿತು.

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಸ್ವಚ್ಛತಾ ಆಂದೋಲನ ಕೈಗೊಳ್ಳುವುದರೊಂದಿಗೆ ೨ ದಿನಗಳ ಕಾಲ ಅರಿವು ಕಾರ್ಯಕ್ರಮ ನಡೆಯಿತು. ಈ ದಾರಿಯಲ್ಲಿ ಪ್ರವಾಸಿಗರ ವಾಹನಗಳನ್ನು ತಪಾಸಣೆಗೊಳಪಡಿಸಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳು ಇದ್ದಲ್ಲಿ ಅವುಗಳನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯದಂತೆ ಅರಿವು ಮೂಡಿಸಲಾಯಿತು.

ಈ ಸಂದರ್ಭ ನಾಗರಹೊಳೆ ರಕ್ಷಿತಾರಣ್ಯದ ನಿರ್ದೇಶಕ ಹರ್ಷ ಕುಮಾರ್, ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕೆ.ಎ. ಚೆಂಗಪ್ಪ ಹಾಗೂ ಅವರ ಪತ್ನಿ ವೀಣಾ ಚೆಂಗಪ್ಪ, ಸಂಘದ ಉಪಾಧ್ಯಕ್ಷ ಕೆ.ಎನ್. ಬೋಸ್ ಮಾದಪ್ಪ, ಕಾರ್ಯದರ್ಶಿ ಸಿ.ಪಿ. ಅಯ್ಯಪ್ಪ, ಸದಸ್ಯರಾದ ಐ.ಎಂ. ಮಾಚಯ್ಯ, ನವೀನ್ ಬೋಪಯ್ಯ, ವಿಶಾಲ್ ಪೊನ್ನಪ್ಪ, ಕರ್ತಮಾಡ ವಿವೇಕ್ ಮತ್ತು ಬೋಪಣ್ಣ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ಹಾಜರಿದ್ದರು.