*ಗೋಣಿಕೊಪ್ಪ, ಅ. ೨೪: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ನವೆಂಬರ್ ೧೪ರಂದು ಗೋಣಿಕೊಪ್ಪ ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅದ್ದೂರಿಯಾಗಿ ಆಚರಿಸಲು ಪೂರ್ವ ತಯಾರಿ ಕೈಗೊಳ್ಳಲಾಗಿದೆ ಎಂದು ಪ್ರಗತಿ ಆಟೋ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಮಲ್ಲಂಡ ಎನ್. ಪ್ರಕಾಶ್ ಮಾಹಿತಿ ನೀಡಿದರು.

ಗೋಣಿಕೊಪ್ಪ ಪ್ರೆಸ್ ಕ್ಲಬ್‌ನಲ್ಲಿ ನೃತ್ಯ ಸ್ಪರ್ಧೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಂಘವು ಪ್ರಥಮ ವರ್ಷವಾಗಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ ಸಂಜೆ ೬ ಗಂಟೆಗೆ ಜಿಲ್ಲಾಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಬೆಳಿಗ್ಗೆ ಬಸ್ಸ್ ನಿಲ್ದಾಣದಲ್ಲಿ ಗ್ರೀಸ್ ಹಚ್ಚಿದ ಕಂಬ ಏರುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಕಳೆದ ಸಾಲಿನ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಕನ್ನಡ ಮಾಧÀ್ಯಮದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಮತ್ತು ಕೊರೊನಾ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರನ್ನು ಸನ್ಮಾನಿಸಲಾಗುವುದು. ಅದರಂತೆ ಉತ್ತಮ ಸಾಮಾಜಿಕ ಸೇವೆಯನ್ನು ನೀಡುತ್ತಿರುವ ಆಟೋ ಚಾಲಕ ರೊಬ್ಬರನ್ನು ಗೌರವಿಸಲಾಗುವುದು ಎಂದು ಹೇಳಿದರು.

೧೪ರಂದು ನಡೆಯುವ ಕಾರ್ಯಕ್ರಮದಲ್ಲಿ ಹಾಜರಿರುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ.

ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಅಂಗಡಿ ಮಳಿಗೆಗಳು, ಆಟೋ, ದ್ವಿಚಕ್ರ ಇನ್ನಿತರ ವಾಹನಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆಯಿAದ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಡಾಡು ಜೋಸೆಫ್ ಮಾತನಾಡಿ, ಜಿಲ್ಲಾಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆಗೆ ಸುಮಾರು ೧೧ ತಂಡಗಳು ಈಗಾಗಲೇ ನೋಂದಾಯಿಸಿ ಕೊಂಡಿದೆ. ಆಸಕ್ತ ತಂಡಗಳು ನವೆಂಬರ್ ೧೦ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ತಂಡಗಳು ೯೪೮೦೨೧೨೫೬೪, ೮೧೦೫೮೨೨೫೯೪ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಲಾಂಛನ ಬಿಡುಗಡೆಯನ್ನು ಸಂಘದ ಉಪಾಧ್ಯಕ್ಷ ನಾಪಂಡ ಕೆ. ಭೀಮಯ್ಯ, ಸಹಕಾರ್ಯದರ್ಶಿ ನಸೀರ್, ಖಜಾಂಚಿ ವಿನು, ನಿರ್ದೇಶಕ ಧನಂಜಯ ಮಾಡಿದರು.