ಕುಶಾಲನಗರ, ಅ.೨೪: ದೀಪಾವಳಿ ಪ್ರಯುಕ್ತ ಕುಶಾಲನಗರ ದೇವಾಲಯ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆ ವತಿಯಿಂದ ಸಾಮರಸ್ಯದ ದೀಪ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುಶಾಲನಗರ ಮಹಾಗಣಪತಿ ದೇವಾಲಯದ ಗರ್ಭಗುಡಿಯಿಂದ ಸಾಮೂಹಿಕವಾಗಿ ಪ್ರಾರ್ಥಿಸಿ ನಂದಾದೀಪವನ್ನು ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಒಯ್ದು ಬಸ್ಥಿಯಲ್ಲಿ ಸ್ಥಾಪಿಸಿದ ದೀಪದಿಂದ ಮನೆ ಮನೆಗಳ ದೀಪ ಬೆಳಗುವ ಕಾರ್ಯಕ್ರಮ ನಡೆಯಿತು.
ದೇವಾಲಯಗಳ ಒಕ್ಕೂಟ ಅಧ್ಯಕ್ಷರಾದ ಎಂ.ಕೆ ದಿನೇಶ್, ಪ್ರಮುಖರಾದ ಅಮೃತ್‌ರಾಜ್, ಜರ್ನಾಧನ್, ಮತ್ತಿತರರ ನೇತೃತ್ವದಲ್ಲಿ ಮೆರವಣಿಗೆ ಮೂಲಕ ತೆರಳಿ ಕುಶಾಲನಗರ ಕಾಳಮ್ಮ ಕಾಲೋನಿಯ ರಾಮಮಂದಿರದ ಸೇವಾ ಬಸ್ಥಿಯಲ್ಲಿ ಸಾಮರಸ್ಯದ ದೀಪವನ್ನು ಬೆಳಗಲಾಯಿತು.
ಈ ಸಂದರ್ಭ ಪ್ರಮುಖರಾದ ಬೋಸ್ ಮೊಣ್ಣಪ್ಪ, ವೇಣು, ಸುಮನ್, ರಮೇಶ್, ಚಂದ್ರು ಸೇರಿದಂತೆ ಸ್ಥಳೀಯ ಹಿಂದೂಪರ ಸಂಘಟನೆಗಳ ಮತ್ತು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.