ಮಡಿಕೇರಿ, ಅ. ೨೪: ತಾಲೂಕು ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸಂಪಾಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲಾ ಶಿಕ್ಷಕರು, ಮೇಲ್ವಿಚಾರಕರು ಉದ್ಘಾಟಿಸಿದರು.
೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಈ ಕಾರ್ಯಕ್ರಮ ಹಮ್ಮಿಕೊಂಡು ೩ ಗುಂಪುಗಳಾಗಿ ಮಾಡಿ ಸ್ಪರ್ಧೆ ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳನ್ನು ನೀಡಲಾಗುತ್ತದೆ ಎಂದು ಮೇಲ್ವಿಚಾರಕಿ ಶೀಲಾ ಅವರು ತಿಳಿಸಿದರು.
ಗ್ರಾ.ಪಂ. ಸದಸ್ಯೆ ರಮಾದೇವಿ ಅವರು ಮಾತನಾಡಿ ಚಿತ್ರಕಲೆ ಎಂದರೆ ನಮ್ಮ ಮನಸ್ಸಿನ ಭಾವನೆಯನ್ನು ಬಣ್ಣಗಳ ಮೂಲಕ ಚಿತ್ರಿಸುವುದು. ರಾಷ್ಟçಭಕ್ತಿಯನ್ನು ತೋರಿಸುವಂತದ್ದು. ಶಾಲೆಯ ಒಳಗಡೆ ಕುಳಿತುಕೊಂಡು ಚಿತ್ರಕಲೆ, ಪ್ರಬಂಧ ಮಂಡನೆ ಭಾಷಣ ಮೊದಲಾದವುಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು. ಶಾಲೆಯಲ್ಲಿ ಗುರುಗಳು ದೇವರ ಸಮಾನ. ಮನೆಯಲ್ಲಿ ತಂದೆ ತಾಯಿ ನಮಗೆ ದೇವರ ಸಮಾನ ಎಂದರು.
ಶಾಲಾ ಶಿಕ್ಷಕ ಸೋಮಣ್ಣ ಅವರು ಮಕ್ಕಳಿಗೆ ಬೇರೆ ಬೇರೆ ಸ್ಪರ್ಧೆಯನ್ನು ಏರ್ಪಡಿಸಿ ಪ್ರತಿಭೆಯನ್ನು ಹೊರಗೆಳೆಯಬೇಕು. ಇದರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಒಳ್ಳೆಯ ಅವಕಾಶ. ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿದಾಗ ಸಂತಸವಾಗುತ್ತದೆ ಎಂದರು.
ಚೆಂಬು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜೀವನ್ ಅವರು ಮಾತನಾಡಿ ಹುಟ್ಟಿನಿಂದ ಬರುವಂತಹ ಮಾತೃಪ್ರೇಮ, ಗುರುವಿನ ಬಗ್ಗೆ ಪ್ರೀತಿ ಇರಬೇಕು. ಮಕ್ಕಳಲ್ಲಿ ದೇಶಭಕ್ತಿ ಮೂಡಿಸಬೇಕು ಎಂದು ಅವರು ತಿಳಿಸಿದರು. ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಒಟ್ಟು ೬೦ ಮಕ್ಕಳಿಗೆ ಪ್ರಶಂಸನಾ ಪತ್ರವನ್ನು ನೀಡ ಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೊಯನಾಡು ಶಾಲಾ ಶಿಕ್ಷಕ ವಿಶ್ವನಾಥ್ ಅವರು ಸ್ವಾಗತಿಸಿ, ವಂದಿಸಿದರು.
ವಿಜೇತರ ವಿವರ: ೫ ರಿಂದ ೮ ವರ್ಷದ ಮಕ್ಕಳಲ್ಲಿ ಊರುಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೃತೀಕಾ (ಪ್ರಥಮ), ಕುಂಬಳಚೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಮಿತಾ (ದ್ವಿತೀಯ), ಬೆಳಕುಮಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಷ್ಪಕ್ (ತೃತೀಯ). ೯ ರಿಂದ ೧೨ ವರ್ಷದ ಮಕ್ಕಳಲ್ಲಿ ಕುಂಬಳಚೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿತಾಶ್ರೀ (ಪ್ರಥಮ), ಹಳೆಚೆಂಬು ಜಿ.ಎಲ್.ಪಿ. ಎಸ್. ಶಾಲೆಯ ವೇದೇಶ್ (ದ್ವಿತೀಯ), ಸಂಪಾಜೆ ಸ.ಮಾ. ಪ್ರಾಥಮಿಕ ಶಾಲೆಯ ದೀಪಕ್ (ತೃತೀಯ) ಸ್ಥಾನ ಪಡೆದಿದ್ದಾರೆ. ೧೩ ರಿಂದ ೧೬ ವರ್ಷದೊಳಗಿನ ಮಕ್ಕಳಲ್ಲಿ ಭಾಗಮಂಡಲ ಜ್ಞಾನೋದಯ ಶಾಲೆಯ ಯಶೃತ್ (ಪ್ರಥಮ), ಚಿಂತನ್ (ದ್ವಿತೀಯ) ಹಾಗೂ ಚೆಂಬು ಪ್ರೌಢ ಶಾಲೆಯ ಸೌಜನ್ಯ (ತೃತೀಯ) ಸ್ಥಾನ ಪಡೆದಿದ್ದಾರೆ.