ಸಿದ್ದಾಪುರ, ಅ. ೨೪: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತದಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಮಿಕ ಸಂಘಟನೆ ನೆಲ್ಲಿಹುದಿಕೇರಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಯ (ಸಿಐಟಿಯು) ಅಧ್ಯಕ್ಷ ಎ.ಸಿ. ಸಾಬು ಮಾತನಾಡಿ ಕೊರೊನಾ ಸಂದರ್ಭದಲ್ಲಿ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಘೋಷಿಸಿದ್ದ ಸಹಾಯ ಧನ ಬಹುತೇಕ ಕಾರ್ಮಿಕರಿಗೆ ಲಭಿಸಿಲ್ಲ, ಶೈಕ್ಷಣಿಕ, ಚಿಕಿತ್ಸೆ, ಮನೆ ನಿರ್ಮಾಣ ಸಹಾಯ ಧನ ಕಾರ್ಮಿಕರಿಗೆ ಲಭಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತೀಶ್ ಮಾತನಾಡಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈಗಾಗಲೇ ಇಲಾಖೆಗಳಲ್ಲಿ ಹಣದ ಕೊರತೆ ಇದ್ದು ಸರಕಾರಿ ಶಾಲೆಗಳಲ್ಲಿ ದೇಣಿಗೆ ಸಂಗ್ರಹದ ಸುತ್ತೋಲೆಯಿಂದ ಮುಜುಗರಕ್ಕೆ ಒಳಗಾಗಿರುವ ಸರಕಾರ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಸುತ್ತೋಲೆಯನ್ನು ಹಿಂಪಡೆದಿದೆ. ಇದೀಗ ಕಾರ್ಮಿಕರ ನಿಧಿ ಮೇಲೆ ಕಣ್ಣಿಟ್ಟಿದ್ದು ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ನೀಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್, ನೆಲ್ಲಿಹುದಿಕೇರಿ ಕಟ್ಟಡ ಕಾರ್ಮಿಕರ ಶಾಖ ಅಧ್ಯಕ್ಷ ಮೋಣಪ್ಪ ಕಾರ್ಯದರ್ಶಿ ಉದಯ, ಸನ್ನಿ, ಬಾಬು, ಶಿವಪ್ಪ ನಾಯಕ, ಚಂದ್ರ, ಶಿವರಾಮ ಮೊದಲಾದವರು ಹಾಜರಿದ್ದರು.