ಕುಶಾಲನಗರ, ಅ. ೨೪: ಕಾವೇರಿ ತೀರ್ಥಯಾತ್ರೆ ತಂಡ ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯ ರಾಮನಾಥಪುರದತ್ತ ತೆರಳಿತು.

ತಾ. ೨೧ ರಂದು ತಲಕಾವೇರಿಯಿಂದ ಚಾಲನೆಗೊಂಡ ಕಾವೇರಿ ಸ್ವಚ್ಛತಾ ಅಭಿಯಾನ ತಂಡ ಕುಶಾಲನಗರ, ಕಣಿವೆ ನದಿ ತಟಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಕೊಣನೂರು ಮೂಲಕ ರಾಮನಾಥಪುರದತ್ತ ಸಾಗಿತು.

ಅಖಿಲ ಭಾರತ ಸನ್ಯಾಸಿಗಳ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ತಂಡಗಳು ಕರ್ನಾಟಕ, ತಮಿಳುನಾಡು ವ್ಯಾಪ್ತಿಯ ಕಾವೇರಿ ನದಿ ತಟಗಳಿಗೆ ತೆರಳಿ ಜನರಿಗೆ ನದಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಿವೆ.

ತಲಕಾವೇರಿ ಕ್ಷೇತ್ರದಿಂದ ಪವಿತ್ರ ತೀರ್ಥವನ್ನು ಯಾತ್ರೆಯಲ್ಲಿ ಒಯ್ಯಲಾಗುತ್ತಿದ್ದು, ನವೆಂಬರ್ ೧೩ರಂದು ತಮಿಳುನಾಡಿನ ಪೂಂಪ್ ಹಾರ್ ಕ್ಷೇತ್ರದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಪವಿತ್ರ ತೀರ್ಥ ವಿಸರ್ಜಿಸುವ ಮೂಲಕ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಎನ್ ಚಂದ್ರಮೋಹನ್ ತಿಳಿಸಿದ್ದಾರೆ.